ರಂ. ಶಾ. ಎಂದು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಿತ ಇರುವ ರಂ.ಶಾ. ಲೋಕಾಪುರ ಅವರ ಪೂರ್ಣ ಹೆಸರು ರಂಗನಾಥ ಶಾಮಾಚಾರ್ಯ ಲೋಕಾಪುರ. ಜಮಖಂಡಿ ತಾಲೂಕಿನ ಹುನ್ನೂರಿನಲ್ಲಿ ಜನಿಸಿದ (1935) ರಂಗನಾಥ ಅವರ ತಂದೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಹೈಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ರಂ. ಶಾ. ಅವರಿಗೆ ಕನ್ನಡ-ಸಂಸ್ಕೃತ ಭಾಷೆ -ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಿತು. ಆಗಲೇ ಸಮಕಾಲೀನ ಕನ್ನಡ ಸಾಹಿತ್ಯದ ಅಭ್ಯಾಸದ ಜೊತೆಯಲ್ಲಿ ಪ್ರ. ಗೋ. ಕುಲಕರ್ಣಿ ಅವರಿಂದ ಹಳಗನ್ನಡದ ಪಾಠ ಹೇಳಿಸಿಕೊಂಡರು. ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ಹಿಂದಿ ಭಾಷೆ ಕಲಿತ ಅವರು ಪ್ರೇಮಚಂದರ ಎಂಟು ಹಿಂದಿ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದರು (1947). ಬೆಳಗಾವಿಯಲ್ಲಿ ಇಂಟರ್ ಮೀಡಿಯೆಟ್ ಮುಗಿಸಿ (1950) ಬಿಎಸ್ಸಿ ಓದುವುದಕ್ಕಾಗಿ ಕೊಲ್ಲಾಪುರದ ರಾಜಾರಾಮ್ ಕಾಲೇಜು ಸೇರಿದರು. ಆಗ ಅಲ್ಲಿ ಪ್ರಾಚಾರ್ಯರಾಗಿದ್ದ ವಿ. ಕೃ. ಗೋಕಾಕ್ ಅವರಿಂದ ಇಂಗ್ಲಿಷ್ ಸಾಹಿತ್ಯದ ಪರಿಚಯ ದೊರೆಯಿತು. ಪದವಿ ಮುಗಿಸಿ, ಕೆಲಸಕ್ಕಾಗಿ ಅಲೆಯಯುತ್ತಾ ಕಾಲ ಕಳೆಯುತ್ತಿದ್ದ ರಂ. ಶಾ. ಅವರು ಮುಂಬೈಯ ಅಕೌಂಟೆಂಟ್ ಜನರಲ್ ಕಚೇರಿಯ ನೌಕರಿಯಲ್ಲಿ (1953) ನಂತರ ನೆಲೆ ನಿಂತರು.
ಬದುಕಿನ ಉದ್ದಕ್ಕೂ ಕಚೇರಿ ಪರೀಕ್ಷೆಗಳು, ಪದೋನ್ನತಿಗಳ ಜಂಜಾಟ ರಂ. ಶಾ. ವೃತ್ತಿ ಜೀವನದ ಭಾಗವಾಗಿದ್ದವು. ಎಲ್ಲ ಅಡ್ಡಿ ಆತಂಕಗಳನ್ನು ಮೀರಿ ಅವರು ಸಾಹಿತ್ಯ ರಚನೆಗೆ ಕೈಹಾಕಿದ್ದು 1968ರಲ್ಲಿ 'ಸುಧಾ', 'ಮಯೂರ'ಗಳ ಮುಖಾಂತರ ಪಿ ಜಿ ವುಡ್ ಹೌಸ್‌ರ ಬರವಣಿಗೆಯಿಂದ ಪ್ರೇರಣೆ ಹೊಂದಿ ಹಾಸ್ಯಲೇಖನ ಬರೆಯಲು ಆರಂಭಿಸಿದರು. ರಂ ಶಾ ಅವರ ಮೊದಲ ಕಾದಂಬರಿ 'ಸಾವಿತ್ರಿ' ಸುಧಾ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು (1969). ಟಿ. ಎಸ್. ರಂಗಾ ಈ ಕಥೆಯನ್ನು ಆಧರಿಸಿ ಚಲನಚಿತ್ರ ನಿರ್ಮಿಸಿದರು (1976). ಬಳಿಕ ರಂ.ಶಾ. ಅವರ ಅನೇಕ ಕಥೆ, ಕಾದಂಬರಿಗಳು 'ಸುಧಾ', 'ಮಯೂರ'ಗಳಲ್ಲಿ ಪ್ರಕಟವಾದವು. ರಂ.ಶಾ. ಅವರ ಎರಡನೆಯ ಕಾದಂಬರಿ 'ತಾಯಿ ಸಾಹೇಬ’ (ಗಿರೀಶ್ ಕಾಸರವಳ್ಳಿ ನಿರ್ದೆಶನದಲ್ಲಿ ಚಲನಚಿತ್ರವಾಗಿದೆ) ’ಪುಣೆಯವರೆಗೆ' (ರಸಿಕ ಸಾಹಿತ್ಯ -1974) ಸಣ್ಣ ಕಥೆಗಳು' (ಸಂಕಲನ) ಅಲ್ಲದೆ ಅನಂತಮೂರ್ತಿ ಅವರ 'ಸಂಸ್ಕಾರ' ಕಾದಂಬರಿ ಮರಾಠಿಗೆ ಅನುವಾದ, ಕಾನಿಟಕರರ ಮರಾಠಿ ಕಾದಂಬರಿ 'ಹೊರ ಪಳ' ಕನ್ನಡ ಅನುವಾದ, ’ಅಗ್ನಿದಿವ್ಯ' (ಸುಧಾ 1976) ರಂ. ಶಾ. ಅವರ ಪ್ರಮುಖ ಕೃತಿಗಳು. ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಕಾರಂತರ 'ಮರಳಿ ಮಣ್ಣಿಗೆ' ಕಾದಂಬರಿಯನ್ನು ಮರಾಠಿಗೆ ಅನುವಾದಿಸಿದ್ದಾರೆ (1980). ಅವರ ಮೂರನೆಯ ಕಾದಂಬರಿ 'ನೂರುತಲೆ ಹತ್ತು ಕಾಲು' ಬಿಡುಗಡೆಯಾಗಿದೆ. ಇಪ್ಪತ್ತೇಳು ವರ್ಷಗಳ ನಂತರ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ರಂ. ಶಾ. ಪುಣೆಯಿಂದ ಬೆಳಗಾವಿಗೆ ಬಂದು ನೆಲೆಸಿದ್ದರು. ಸಣ್ಣ ಸ್ಟೇಷನರಿ, ಪುಸ್ತಕಗಳ ಅಂಗಡಿ ನಡೆಸುತ್ತಿದ್ದರು. ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ಅವರು ಪುಣೆಯಲ್ಲಿ 2019ರ ನವೆಂಬರ್ 19ರಂದು ನಿಧನರಾದರು.
ಮರಾಠಿಯಲ್ಲಿ 'ಜ್ಞಾನೇಶ್ವರಿ'ಯನ್ನು ಅಭ್ಯಸಿಸಿದ ಅವರು ಕನ್ನಡ-ಮರಾಠಿ ಭಾಷೆಗಳ ತೌಲನಿಕ ಅಭ್ಯಾಸವನ್ನು ಆಳವಾಗಿ ಮಾಡಿದ ಶ್ರೀರಂಗ, ಶಂ. ಬಾ., ಬೇಂದ್ರೆ ಅವರ ನಂತರ ಮಹತ್ವದ ಕೆಲಸ ಮಾಡಿದ ಲೇಖಕ. ಅವರ ಸಂಶೋಧನ ಪ್ರಬಂಧ 'ಹಳಗನ್ನಡ ಮತ್ತು ಮರಾಠಿ' (ಕನ್ನಡ ವಿಶ್ವವಿದ್ಯಾಲಯ-1994), ಪುನರ್ ಲೇಖನಗೊಂಡ ಇದರ ಮರಾಠಿ ಆವೃತ್ತಿ `ಜ್ಞಾನೇಶ್ವರೀ ಕಾಲೀನ ಮರಾಠಿ ಭಾಷೇವರ ಕನ್ನಡ ಪ್ರಭಾವ' ಗ್ರಂಥವನ್ನು ಸ್ವತಃ ತಾವೇ ಪ್ರಕಟಿಸಿದ್ದರು. ಪುಣೆಯ 'ಮಹಾರಾಷ್ಟ್ರ ಗ್ರಂಥೋತ್ತೇಜಕ ಸಂಸ್ಥೆ 'ಯವರು ಈ ಕೃತಿಗೆ ಪುರಸ್ಕಾರ ನೀಡಿ ಗೌರವಿಸಿತ್ತು.