ಡಾ. ರಾಜಪ್ಪ ದಳವಾಯಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಅನುವನಹಳ್ಳಿಯವರು. 1962ರಲ್ಲಿ ಜನನ. ಕನ್ನಡ ಪ್ರಾಧ್ಯಾಪಕರು. ಇವರು ಎಂಎ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಿಂದ. ಕನ್ನಡದಲ್ಲಿ ಸಂಸ್ಕೃತಿ ನಿರ್ವಚನ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ. ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಪುರಾಣ ಚಾರಿತ್ರಿಕ ವಾಸ್ತವ ಎಂಬ ವಿಷಯದ ಮೇಲಿನ ಅಧ್ಯಯನಕ್ಕೆ ದ್ರಾವಿಡ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿ. ಕವಿರಾಜಮಾರ್ಗ-ಬಹುಶಿಸ್ತೀಯ ಅಧ್ಯಯನ ಕುರಿತ ಸಂಶೋಧನೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ. ಕಾವ್ಯ, ಕಥೆ, ನಾಟಕ, ವಿಮರ್ಶೆ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಹಲವಾರು ಕೃತಿಗಳು ಇವರ ಸಂಪಾದಕತ್ವದಲ್ಲಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಕೋಶ, ಕದಿರು, ತೊಗಲು ಬೊಂಬೆಯಾಟ, ನೆನಪುಗಳು ಸಾಯುವುದಿಲ್ಲ ಇವು ಇವರ ಪ್ರಮುಖ ಸಮಪಾದಿತ ಕೃತಿಗಳು. ಸಗಟು ಕವಿಯ ಚಿಲ್ಲರೆ ಪದ್ಯಗಳು, ರಕ್ತದ ಬಣ್ನ ಕಪ್ಪು, ಜಲರೂಪಿ ನಗು (ಕಾವ್ಯ). ಕಪ್ಪು ದಾರಿಯ ಕೆಂಪು ಚಿತ್ರ, ಚಲನ (ಕತೆ), ಡೋಲಿ ಮತ್ತಿತರ ನಾಟಕಗಳು, ದಳವಾಯಿ ಡಜನ್ ನಾಟಕಗಳು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ನಾಟಕ ಅಕಾಡೆಮಿ ಸುವರ್ಣ ಪ್ರಶಸ್ತಿ, ಸಾಹಿತ್ಯಶ್ರಿ ಪ್ರಶಸ್ತಿ ಮೊದಲಾದ ಗೌರವಗಳಿಗೆ ಪಾತ್ರರಾಗಿದ್ದಾರೆ. ಚಲನಚಿತ್ರಗಳಲ್ಲೂ ನಟನೆ, ಕಲಾ ನಿರ್ದೇಶನ, ಸಂಭಾಷಣೆ, ಚಿತ್ರಕಥೆ ಮೊದಲಾದ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.