ವಿಮಾ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಆರ್ ಶ್ರೀನಾಗೇಶ್ ಅವರಿಗೆ ಬರವಣಿಗೆ ಹವ್ಯಾಸ. ೧೯೬೯ರಿಂದ ಅವರ ಬರವಣಿಗೆಯ ಸಾಹಸ ಮುಂದುವರಿದಿದೆ. ವಿದ್ಯಾರ್ಥಿಗಳ ಗಣಿತ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಅವರು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸಲ್ಲಿಸಿದ ಸೇವೆ ಅನುಪಮವಾದುದು.
ಬೆಂಗಳೂರು ವಿಶ್ವವಿದ್ಯಾಲಯದ ಪದವೀಧರರಾದ ನಾಗೇಶ್ ವಿಮೆ ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಡಿಪ್ಲೊಮ ಮತ್ತು ಆಪ್ತ ಸಲಹಾ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1995 ರಿಂದ ನಾಡಿನ ಹಲವೆಡೆ ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಸ್ವಯಂ ನಿರ್ವಹಣಾ ತರಬೇತಿಗಳನ್ನು ಕೊಟ್ಟಿದ್ದಾರೆ.
’ಮಕ್ಕಳನ್ನು ಬೈಯುವುದು ಹೇಗೆ’, ’ ಮಕ್ಕಳು ಬೆಳೆಯುತ್ತಿದ್ದಾರೆ, ಎಚ್ಚರಿಕೆ’, ’ಪರೀಕ್ಷೆ, ನನಗೇನು ಭಯ?’, ’ಜತೀಂದ್ರಮೋಹನ್ ಸೇನ್ ಗುಪ್ತ’, ’ಟಿ.ಪ್ರಕಾಶಂ’, ’ಜೀವವಿಮೆ’ ಇವರ ಪ್ರಮುಖ ಕೃತಿಗಳು.