ಹಾಸನ ಜಿಲ್ಲೆಯ ಸಕಲೇಶಪುರದವರಾದ ಪ್ರಸಾದ ರಕ್ಷಿದಿ ಅವರು ಖ್ಯಾತ ರಂಗಕರ್ಮಿ. ಬಿಎಸ್ಸಿ ಪದವೀಧರ ಆಗಿರುವ ಅವರು ನಾಟಕ ರಚನೆ, ನಟನೆ, ರಂಗ ಸಂಘಟನೆ, ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಮ್ಮ ಎಲುಬುಗಳ ಮೇಲೆ, ಅನಾಮಿಕರು, ಸತ್ಯಕ್ಕೆ ಸಾವಿಲ್ಲ, ಮಾಯಾಮೃಗ, ಪ್ಲಾಂಟರ್ ಪರಮೇಶಿ, ಧನ್ವಂತರಿಯ ಚಿಕಿತ್ಸೆ ಅವರು ನಿರ್ದೇಶಿಸಿದ ನಾಟಕಗಳು. ನಮ್ಮ ನಡುವಿನ ತೇಜಸ್ವಿ ಆಪ್ತವಾದ ವ್ಯಕ್ತಿಚಿತ್ರ. ಬೆಳ್ಳೆಕೆರೆ ಹಳ್ಳೀ ಥೇಟರ್ ಒಂದು ಗ್ರಾಮೀಣ ರಂಗಭೂಮಿಯ ಆತ್ಮೀಯ ಆತ್ಮಕಥನ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಂದ ಸಾಂಸ್ಕೃತಿಕ ಹಾಗೂ ರಂಗ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವ ಅವರು ಜೈ ಕರ್ನಾಟಕ ಸಂಘ ಬೆಳ್ಳೇಕೆರೆ ಮತ್ತು ಪ್ರಕೃತಿ ರಂಗ ಮಂಚ ಸಂಸ್ಥೆಗಳ ಸ್ಥಾಪಕ ಸದಸ್ಯರು. ಕನ್ನಡ ಸಾಹಿತ್ಯ ಪರಿಷತ್ತಿನ ಸಕಲೇಶಪುರ ತಾಲೂಕು ಘಟಕದ ಅಧ್ಯಕ್ಷ ಆಗಿದ್ದ ಅವರು ಸಾವಯವ ಕೃಷಿ, ರೈತ ಚಳುವಳಿ, ರಾಜಕೀಯ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅವರ ರಂಗಭೂಮಿ ಸೇವೆಗಾಗಿ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ಸುವರ್ಣ ರಂಗ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ, ಮಂಡ್ಯದ ಕೆ.ವಿ.ಶಂಕರ ಗೌಡ ಪ್ರತಿಷ್ಠಾನದ ರಾಜ್ಯ ಮಟ್ಟದ ರಂಗಭೂಮಿ ಪ್ರಶಸ್ತಿ ದೊರೆತಿವೆ. ಸಾಮಾಜಿಕ ಸೇವೆಗಾಗಿ ಹಾಸನ ಜಿಲ್ಲಾ ಪಂಚಾಯಿತ್‌ನಿಂದ ‘ಡಾ. ಅಂಬೇಡ್ಕರ್ ಪ್ರಶಸ್ತಿ’ ಹಾಗೂ ರಾಜ್ಯ ಮಟ್ಟದ ಮಕ್ಕಳ ಕಥಾ ಪುರಸ್ಕಾರವಾಗಿರುವ ಗುಲಬರ್ಗಾದ ಸಂಧ್ಯಾ ಸಾಹಿತ್ಯ ವೇದಿಕೆಯ ರಾಜ್ಯ ಮಟ್ಟದ ಮೇವುಂಡಿ ಮಲ್ಲಾರಿ ಪ್ರಶಸ್ತಿಗಳು ಕೂಡ ದೊರಕಿವೆ.