ಲೇಖಕಿ ಪ್ರಜ್ಞಾ ಮತ್ತಿಹಳ್ಳಿ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. 1969ರ ಏಪ್ರಿಲ್ 02ರಂದು ಜನಿಸಿದ ಅವರು ವಾಣಿಜ್ಯಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಪ್ರಜ್ಞಾ ಮತ್ತಿಹಳ್ಳಿ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸೃಜನಶೀಲ ಪ್ರಯೋಗ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಥೆ, ಕಾವ್ಯದ ಜೊತೆಗೆ ಹಾಸ್ಯ ಲೇಖನಗಳನ್ನು ಬರೆದಿರುವ ಅವರಿಗೆ ನಾಟಕ ರಚನೆ ಕೂಡ ಆಸಕ್ತಿಯ ಕ್ಷೇತ್ರ. ಅವರ ಕಥೆಗಳು ಮತ್ತು ಕವನಗಳು ನಾಡಿನ ವಿವಿಧ ಪತ್ರಿಕೆಗಳ ವಿಶೇಷಾಂಕಗಳ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿವೆ. ನುರಿತ ಯಕ್ಷಗಾನ ಕಲಾವಿದೆಯೂ ಆಗಿರುವ ಅವರು ಅದಕ್ಕಾಗಿ ಶಾಸ್ತ್ರೀಯ ತರಬೇತಿ ಪಡೆದಿದ್ದಾರೆ. ಅವರ ಪ್ರಕಟಿತ ಕೃತಿಗಳು- ಹುಡುಗಿ ನಕ್ಕಾಗ, ದೊನ್ನೆ ದೀಪದ ಸಾಲು, ಕಾಲನ ಕಾಲಂದುಗೆ (ಕವನ ಸಂಕಲನಗಳು), ದೇವರ ಸ್ವಂತ ನಾಡಿನಲ್ಲಿ (ಪ್ರವಾಸ ಕಥನ), ಮಿನುಗೆಲೆ ನಕ್ಷತ್ರ (ಹಾಸ್ಯ ಪ್ರಬಂಧಗಳು), ಗಂಧಗಾಳಿ (ಅಂಕಣ ಬರಹಗಳು).