ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿರುವ ಡಾ. ಪಿ. ಶ್ರೀಕೃಷ್ಣ ಭಟ್ ಅವರು 1969ರಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗಕ್ಕೆ ಉಪನ್ಯಾಸಕನಾಗಿ ಸೇರಿದರು. ನಂತರ ಪ್ರೊಫೆಸರ್ ಆಗಿ ಬಡ್ತಿ ಪಡೆದು ವಿಭಾಗ ಮುಖ್ಯಸ್ಥನಾದರು. ನಿವೃತ್ತಿಯ ನಂತರ, 1998ರಿಂದ ಹತ್ತು ವರ್ಷಗಳ ಕಾಲ ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗದ ಮೊದಲ ಸಂಯೋಜಕರಾಗಿ ಸೇವೆಸಲ್ಲಿಸಿದ್ದಾರೆ. ಸ್ನಾತಕೋತ್ತರ ತರಗತಿಗಳಲ್ಲಿ ಭಾಷಾ ವಿಜ್ಞಾನವೂ ಸೇರಿದಂತೆ ಶಾಸ್ತ್ರ ವಿಷಯಗಳನ್ನು ಪಾಠ ಹೇಳುತ್ತಿದ್ದ ಅವರ ಸ್ವರಭಾರ, ಉಚ್ಚಾರದ ಸ್ಪಷ್ಟತೆಯ ಮೋಡಿಗೆ ಒಳಗಾಗದ ವಿದ್ಯಾರ್ಥಿಗಳಿಲ್ಲ. 'ಶಾಸನ ಮತ್ತು ವೀರಗಲ್ಲುಗಳು', 'ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು', 'ಶಾಸ್ತ್ರ ಸಾಹಿತ್ಯ ವಿಹಾರ', 'ಕಳ್ಳಿಗೆ ಮಹಾಬಲ ಭಂಡಾರಿ' ಇವರ ಮುಖ್ಯ ಕೃತಿಗಳು. 'ಗಡಿನಾಡ ದೀಪ', 'ಡಿವಿಜಿ ದರ್ಶನ', 'ಡಿಂಡಿಮ' ಮತ್ತು 'ಪೊಂಗದಿರು' ಸಂಪಾದಿತ ಕೃತಿಗಳು.