ಡಾ. ಎನ್.ಎಂ. ಗಿರಿಜಾಪತಿ ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಡಿಸೆಂಬರ್ 17, 1966ರಲ್ಲಿ ಜನಿಸಿದರು. ತಂದೆ ದಿ. ಎನ್. ಎಂ. ಸೋಮಶೇಖರಯ್ಯ ಶಾಸ್ತ್ರಿ, ತಾಯಿ ಶ್ರೀಮತಿ. ವಿಶಾಲಾಕ್ಷಮ್ಮ. ಇವರು ಕನ್ನಡದಲ್ಲಿ ಎಂ.ಎ, ಬಿ.ಈಡಿ ಮತ್ತು ಪಿ.ಹೆಚ್.ಡಿ ವ್ಯಾಸಂಗ ಮಾಡಿದ್ದಾರೆ. ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಗಿರಿಜಾಪತಿ ಅವರು ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆಸಲ್ಲಿಸಿದ್ದಾರೆ. ಪ್ರಸ್ತುತ ಗುಂಡ್ಲುಪೇಟೆಯಲ್ಲಿರುವ ಜೆ ಎಸ್ ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿನ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಅನುಭವಿ ಪ್ರಾಧ್ಯಾಪಕರಾಗಿ, ಶಿಕ್ಷಣ ತಜ್ಞರಾಗಿ ಶಿಕ್ಷಕರಿಗಾಗಿ ಆಯೋಜಿಸಲಾಗುವ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಬರಹಗಾರರಾಗಿರುವ ಇವರು, ಶಾಸ್ತ್ರ ಕೃತಿಗಳು ಮತ್ತು ಸೃಜನಶೀಲ ಕೃತಿಗಳ ಲೇಖಕರಾಗಿ, ಸಂಪಾದಕರಾಗಿ, ಅನುವಾದಕರಾಗಿ ಕನ್ನಡ ಭಾಷಾಶಾಸ್ತ್ರ, ವ್ಯಾಕರಣ, ಛಂದಸ್ಸು, ಕಾವ್ಯಮೀಮಾಂಸೆ, ಸಂಶೋಧನಾ ಶಾಸ್ತ್ರ ಮತ್ತು ಪ್ರಬಂಧ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಕಾವ್ಯ, ಕಥಾ ಸಂಕಲನ, ಮಕ್ಕಳ ನಾಟಕಗಳು, ಲಲಿತ ಪ್ರಬಂಧ, ಜನಪದ ಕೃತಿಗಳ ಸಂಪಾದನೆ, ತೆಲುಗು ಮತ್ತು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಂದ ಕನ್ನಡಕ್ಕೆ ಅನುವಾದವನ್ನೂ ಮಾಡಿದ್ದಾರೆೆ. ಕೃತಿಗಳು: ತಾಯಿ ಭಾರತಿ ಸುತೆ ಕನ್ನಡತಿ, ಸದ್ಭೋಧಾಮೃತ ಶತಕ, ವಚನ ಚಿಂತಾಮಣಿ, ಭಾವನದಿ ದಂಡೆಯ ಮೇಲೆ, ನಾವು ನಮ್ಮವರು ಇತ್ಯಾದಿ...