ಕೊಲ್ಲಾಪುರದಲ್ಲಿ ಜನಿಸಿದ ಮಾಲತಿ ಪಟ್ಟಣಶೆಟ್ಟಿ ಅವರ ತಾಯಿ ಶಿವಗಂಗೆ. ಮೂರೇ ವರ್ಷದಲ್ಲಿ ತಾಯಿಲ್ಲದ ತಬ್ಬಲಿಯಾದರು. ತಂದೆ ಶಾಂತೇಶ ಕೋಟೂರ. ಧಾರವಾಡದ ಹೆಣ್ಣುಮಕ್ಕಳ ತರಬೇತಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದರು. ಬೆಳಗಾವಿಯ ರಾಣಿ ಪಾರ್ವತಿದೇವಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ಧಾರವಾಡದ ಜೆ.ಎಸ್.ಎಸ್. ಕಾಲೇಜು ಸೇರಿದರು. ಅಲ್ಲಿಯೇ ವಿಭಾಗದ ಮುಖ್ಯಸ್ಥರಾಗಿ 1998ರಲ್ಲಿ ನಿವೃತ್ತರಾದರು.
ಅಂತರಂಗ ನಾಟಕ ತಂಡದ ಜೊತೆಗೆ ಗುರುತಿಸಿಕೊಂಡಿದ್ದ ಅವರು ನಾಟಕಗಳಲ್ಲಿ ಸ್ತ್ರೀ ಪಾತ್ರಗಳಲ್ಲಿ ನಟಿಸುತ್ತಿದ್ದರು. ಬಾ ಪರೀಕ್ಷೆಗೆ (1976) , ಗರಿಗೆದರಿ, ತಂದೆ ಬದುಕು ಗುಲಾಬಿ, ದಾಹ ತೀರ, ಮೌನ ಕರಗುವ ಹೊತ್ತು, ಹೂ ದಂಡಿ, ಎಷ್ಟೊಂದು, ನನ್ನ ಸೂರ್ಯ (ಕವನಸಂಕಲನ). ನೋವು, ಪ್ರೀತಿ-ವಾತ್ಸಲ, ನಿಸರ್ಗ ಪ್ರೀತಿ ಅವರ ಕಾವ್ಯದ ವಿಶೇಷ.
ಇಂದು ನಿನ್ನ ಕತೆ, ಸೂರ್ಯ ಮುಳುಗುವುದಿಲ್ಲ, ಇನ್ನಷ್ಟು ಕತೆಗಳು (ಕಥಾಸಂಕಲನಗಳು), ಬಸವರಾಜ ಕಟ್ಟಿಮನಿ ಬದುಕು ಬರಹ, ಶ್ರೀನಿವಾಸ ವೈದ್ಯ, ಬೆಳ್ಳಕ್ಕಿ ಸಾಲು (ಮಕ್ಕಳ ಕವಿತಾ ಸಂಗ್ರಹ), ಮಾಡಿ ಮಡಿ ಪ್ರಕಟಿತ ಕೃತಿಗಳು.
ಪ್ರಶಾಂತ (ಮಾಳವಾಡ ಅಭಿನಂದನ ಗ್ರಂಥ), ಕವಿತೆ-1996 (ಸಂಪಾದನೆ), ಗೀತಾಂಜಲಿ (ಗೀತಾ ಕುಲಕರ್ಣಿ ಅಭಿನಂದನೆ ಗ್ರಂಥ)
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿ, ಅನುಪಮಾ ನಿರಂಜನ ಪ್ರಶಸ್ತಿ, ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಸಂದಿವೆ. ಅವರಿಗೆ ಮಂದಾರ ಅಭಿನಂದನ ಗ್ರಂಥ ಸಲ್ಲಿಸಲಾಗಿದೆ. ಅಖಿಲ ಭಾರತ ಹೊರನಾಡ ಮೊದಲ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದರು.