ಲೇಖಕ, ರಾಜಕಾರಣಿ ಎಂ. ವೈ. ಘೋರ್ಪಡೆ ಅವರು 1931 ಡಿಸೆಂಬರ್ 7 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಯಶವಂತರಾವ್, ತಾಯಿ ಸುಶೀಲಾದೇವಿ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. 1959ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಂಡೂರು ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದ ಇವರು ಒಟ್ಟು 7 ಬಾರಿ (1959, 1962, 1967, 1972, 1989, 1994, 1999) ಶಾಸಕರಾಗಿದ್ದರು. 1986ರಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿದ್ದರು. ಪರಿಸರ ಪ್ರೇಮಿಯಾಗಿದ್ದ ಘೋರ್ಪಡೆ ವನ್ಯಜೀವಿ ಛಾಯಾಗ್ರಾಹಕರಾಗಿ ಅಂತಾರಾಷ್ಟ್ರೀಯ ಪುರಸ್ಕಾರಗಳಿಗೂ ಭಾಜನರಾಗಿದ್ದರು. ವನ್ಯಜೀವಿ ಛಾಯಾಚಿತ್ರಗಳ ಸಂಕಲನ `ಸನ್‌ಲೈಟ್ ಅಂಡ್ ಶ್ಯಾಡೋಸ್’, `ಡೆವಲಪ್‌ಮೆಂಟ್ ಎಥೋಸ್ ಅಂಡ್ ಎಕ್ಸ್‌ಪೀರಿಯನ್ಸ್’, `ಗ್ರಾಂಡ್ ರೆಸಿಸ್ಟೆನ್ಸ್’, `ಪರಮಾಚಾರ್ಯ ಆಫ್ ಕಂಚ’ ಅವರ ಪ್ರಮುಖ ಕೃತಿಗಳು.
ಅವರ ಸಾಧನೆಯನ್ನು ಪರಿಗಣಿಸಿ 1985ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವನ್ಯಜೀವಿ ಛಾಯಾಗ್ರಹಣಕ್ಕೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ವಿಶ್ವದಲ್ಲೇ ಮೊಟ್ಟ ಮೊದಲು ಬಾರಿಗೆ ಪ್ರತಿಷ್ಠಿತ ಮಾಸ್ಟರ್ ಫೋಟೋಗ್ರಾಫರ್ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಲಭಿಸಿವೆ. ಅವರು 2011 ಅಕ್ಟೋಬರ್ 29 ರಂದು ನಿಧನರಾದರು.