ಮ.ನ. ಮೂರ್ತಿ (06-06-1906, 22-04-1977) ಕಥೆ, ಕಾದಂಬರಿಕಾರರು, ಪತ್ರಿಕಾ ಸಂಪಾದಕರು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಮಂದಲಹಳ್ಳಿಯವರು. ತಂದೆ ಮಧ್ವರಾವ್ ಮತ್ತು ತಾಯಿ ಭೀಮಕ್ಕ. ಪ್ರೌಢಶಾಲೆ ಶಿಕ್ಷಣವನ್ನು ತುಮಕೂರಿನಲ್ಲಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ. ಸೇರಿ ನಂತರ ಕನ್ನಡದಲ್ಲಿಯ ಆಸಕ್ತಿಯಿಂದ ಸಾಹಿತಿ ಎ.ಆರ್. ಕೃಷ್ಣ ಶಾಸ್ತ್ರೀ ಹಾಗೂ ಟಿ.ಎಸ್. ವೆಂಕಣ್ಣಯ್ಯ ಅವರ ಪ್ರೋತ್ಸಾಹದಿಂದ ಬಿ.ಎ. ಪೂರೈಸಿದರು.
ಕೃತಿಗಳು: ‘ಚಿಕ್ಕದೇವರಾಯ’ (ಕಾದಂಬರಿ), ‘ಟಿಪ್ಪೂ ಸುಲ್ತಾನ್’ (3 ಭಾಗಗಳಲ್ಲಿ) ಹಾಗೂ ಸಣ್ಣ ಕಥಾ ಸಂಕಲನ ‘ತಂಗಳೂಟ’. ‘ಗಾನಯೋಗಿ ರಾಮಣ್ಣ’, ‘ಸ್ವಯಂವರ’, ‘ಸುವರ್ಣ ಮುಖಿ’ (ಕಾದಂಬರಿಗಳು), ಪ್ರಜಾಮತ ವಾರಪತ್ರಿಕೆಗಾಗಿ ‘ಶಾಂತಲಾ’ ಕಾದಂಬರಿಯನ್ನು ಬರೆಯತೊಡಗಿದಾಗ ಅನಿರೀಕ್ಷಿತವಾಗಿ ಪ್ರಜಾಮತ ವ್ಯವಸ್ಥಾಪಕ ಸಂಪಾದಕರ ಹುದ್ದೆಯೂ ದೊರೆತು ನಿವೃತ್ತಿಯಾಗುವವರೆಗೂ ಈ ಪತ್ರಿಕೆಗಾಗಿ ದುಡಿದರು. ಇವರ ಕಾದಂಬರಿಗಳಲ್ಲಿ ‘ದೇವರ ಮಕ್ಕಳು’ (1970), ‘ಸ್ವಯಂವರ’ (1973), ಮತ್ತು ‘ಬಿಳಿಯ ಹೆಂಡತಿ’ (1975), ಚಲನಚಿತ್ರಗಳಾಗಿ ಜನಪ್ರಿಯಗೊಂಡವು.
‘ನವಾಬ ಹೈದರಾಲಿ’, ‘ಬೆಂಗಳೂರು ಕೆಂಪೇಗೌಡ’, ‘ಪುರುಷ ಕಸ್ತೂರಿ’, ‘ಜಯವಂತಿ’ ಮುಂತಾದ ಹತ್ತು ಐತಿಹಾಸಿಕ ಕಾದಂಬರಿಗಳನ್ನು ರಚಿಸಿದರು. ನಮ್ಮ ಪ್ರವಾಸ ಮತ್ತು ನಾವು ಕಂಡ ಬೆಂಗಳೂರು ಎಂಬ ಎರಡು ಪ್ರವಾಸ ಕಥನಗಳನ್ನು ರಚಿಸಿದರು. ಪ್ರೇಮ ಸುಧಾ, ಆರಾಧಿತೆ, ಸಹಧರ್ಮಿಣಿ, ಚಿತ್ರ ನಾಯಕಿ, ಮಾಂಗಲ್ಯ ಭಾಗ್ಯ, ದೇವರ ರಹಸ್ಯ, ವಸುಂಧರ, ಭಕ್ತ ಕನಕದಾಸ, ಅಲಕಾನಂದ, ಸಂಶಯದ ಸುಳಿಯಲ್ಲಿ, ಮುಂತಾಧ 4೦ ಕಾದಂಬರಿಗಳನ್ನು ಹಾಗೂ ‘ಕರ್ನಾಟಕ ಸಂಗೀತ ಕ್ಷೇತ್ರದ ನಾಡ ಕಣ್ಮಣಿಗಳು’ ಪ್ರಕಟಿಸಿದರು. ರತ್ನ ಸಿಂಹಾಸನ, ಬೆಂಗಳೂರು ಕೆಂಪೇಗೌಡ, ಸಂತಾನ ಲಕ್ಷ್ಮೀ (ಕೇಂದ್ರ ಪ್ರಶಸ್ತಿ ಪುರಸ್ಕೃತ ನಾಟಕ) ಮುಂತಾದ ನಾಟಕಗಳೂ ಸೇರಿ ಸುಮಾರು 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ಹಂಪಿಯ ಪುರಂದರ ಮಂಟಪದಲ್ಲಿ ಪ್ರತಿ ವರ್ಷ ಪುರಂದರ ಉತ್ಸವ ನಡೆಸಲು ಮೊದಲು ಚಾಲನೆ ನೀಡಿದ್ದೇ ಮ.ನ.ಮೂರ್ತಿ. ಅವರು 22 -04-1977 ರಂದು ನಿಧನರಾದರು.