ಮೈಸೂರಿನಲ್ಲಿ 1947ರಲ್ಲಿ ಜನಿಸಿದ ಎಲ್. ಶಿವಲಿಂಗಪ್ಪ ಅವರು ಮೈಸೂರು ಅರಮನೆಯ ಖ್ಯಾತ ಕಲಾವಿದ, ಶಿಲ್ಪ ಸಿದ್ದಾಂತಿ ಸಿದ್ದಲಿಂಗಸ್ವಾಮಿ ಅವರಿಂದಲೇ ಪ್ರಾಥಮಿಕ ಹಂತದ ಚಿತ್ರಕಲಾಭ್ಯಾಸ ಮಾಡಿದವರು. 1966ರಲ್ಲಿ ಬೆಂಗಳೂರಿಗೆ ಬಂದ ನಂತರ ಎಂ.ಟಿ.ವಿ. ಆಚಾರ್ಯರ ಕಲಾಶಾಲೆಯಲ್ಲಿ ಕ್ರಮಬದ್ಧ ಶಿಕ್ಷಣ ಹಾಗೂ ಪದವಿ ಪಡೆದರು.
ಚಿತ್ರ-ಶಿಲ್ಪ ಎರಡೂ ಕ್ಷೇತ್ರಗಳಲ್ಲಿ ಹಲವಾರು ಪ್ರಯೋಗ ಮಾಡಿರುವ ಶ್ರೀಯುತರು ನಾಲ್ಕು ಏಕವ್ಯಕ್ತಿ ಪ್ರದರ್ಶನಗಳಲ್ಲದೆ ಹಲವಾರು ಗುಂಪು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. 1997 - 2000 ರಲ್ಲಿ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿದ್ದು, ಮರಳಚ್ಚಿನಲ್ಲಿ (Sand cast) ಹಾಗೂ ಥರ್ಮೊಕೋಲ್‌ಗಳಲ್ಲಿ ಶಿಲ್ಪ ರಚಿಸುವ ಬಗ್ಗೆ ಹಲವಾರು ಯಶಸ್ವಿ ಪ್ರಯೋಗಗಳನ್ನು ಮಾಡಿದ್ದಾರೆ. ಅಂತೆಯೇ ಬೆಂಗಳೂರಿನ ಶಿಲ್ಪಕಲಾಮೇಳವೂ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾಶಿಬಿರಗಳಲ್ಲೂ ಭಾಗವಹಿಸಿದ್ದಾರೆ.
ಕಲಾಪರವಾದ ಸಂಘ ಸಂಸ್ಥೆಗಳಲ್ಲಿ ಆಯ್ಕೆ ಸಮಿತಿಗಳಲ್ಲಿ, ಪಠ್ಯವಸ್ತು, ಪಠ್ಯವಿಷಯಗಳ ಸಮಿತಿಗಳಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ. ಎಂ.ಟಿ.ವಿ. ಆಚಾರ್ಯರ ಮೆಚ್ಚಿನ ಶಿಷ್ಯರಾಗಿ ಚಿತ್ರಕಲಾ ಭವನದ ಬೆಳವಣಿಗೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಆಚಾರ್ಯರ ಕಾಲಾನಂತರದಲ್ಲಿ ಕಲಾಶಾಲೆಯ ಪೂರ್ಣ ಜವಾಬ್ದಾರಿ ಹೊತ್ತಿರುವರು. ಕಲಾಗುರು ಎಂ.ಟಿ.ವಿ. ಆಚಾರ್ಯ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ, ರಾಜ್ಯದ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿದ್ದಾರೆ.
ಸ್ವತಃ ಛಾಯಾಗ್ರಾಹಕರಾಗಿದ್ದು ಚಿತ್ರಕಲೆ, ಶಿಲ್ಪಕಲೆಗಳನ್ನು ಕುರಿತು ಹಲವಾರು ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುತ್ತಾರೆ. ಶಿಲ್ಪಸಿದ್ಧಾಂತಿ ಶ್ರೀ ಸಿದ್ಧಲಿಂಗ ಸ್ವಾಮಿಗಳು ಮತ್ತು ನಾಗೇಂದ್ರಸ್ಥಪತಿ ಅವರ ಕುರಿತ ಪುಸ್ತಕಗಳು ಪ್ರಕಟಗೊಂಡಿವೆ. ದೂರದರ್ಶನ, ಆಕಾಶವಾಣಿ ಹಾಗೂ ನಿಯತಕಾಲಿಕೆ, ಪತ್ರಿಕೆಗಳಂತಹ ಮಾಧ್ಯಮಗಳಲ್ಲಿ ಸಂದರ್ಶನ, ಚಿತ್ರಶಿಲ್ಪಗಳ ಪರಿಚಯ, ವಿಮರ್ಶೆ ಕುರಿತಂತೆ ನೂರಾರು ಲೇಖನಗಳು ಪ್ರಕಟಗೊಂಡಿವೆ. 'ಉದಯವಾಣಿ' ಪತ್ರಿಕೆಯಲ್ಲಿ ಕಲೆ-ಕಲಾವಿದರನ್ನು ಕುರಿತು ನಿಯಮಿತವಾಗಿ ಪರಿಚಯಿಸುತ್ತಿದ್ದ ಅವರು ಶ್ರೀ ಎಸ್. ಕಾಳಪ್ಪ ಹಾಗೂ ಶ್ರೀ ಎಚ್.ಎಸ್. ಇನಾಮತಿ ಅವರ ಬಗ್ಗೆ ಪುಸ್ತಕಗಳನ್ನು ರಚಿಸಿದ್ದಾರೆ.
ಮೈಸೂರು ಆರ್ಟ್ ಗ್ಯಾಲರಿಯ ಅಧ್ಯಕ್ಷರಾದ ಎಲ್.ಶಿವಲಿಂಗಪ್ಪಅವರು ವಚನಗಳಿಗೆ ಚಿತ್ರರೂಪ ಕೊಟ್ಟ ಜಗತ್ತಿನ ಮೊದಲ ಕಲಾವಿದರು. ವಚನಕಾರರು ಹಾಗೂ ವಚನಗಳ ತಿರುಳಿಗೆ ಪೂರಕವಾಗಿ ಚಿತ್ರ ರಚಿಸಿದ ಶಿವಲಿಂಗಯ್ಯ ಅವರ ಸಾಧನೆ ಎಲ್ಲೆಡೆಯೂ ಪ್ರಶಂಸೆಗೆ ಪಾತ್ರವಾಗಿದೆ. 'ರೇಖಾಚಿತ್ರ ಪ್ರವೀಣ ಸಿ. ಕುಪ್ಪಾಚಾರ್ಯ', `ಸಾಥ್ವಿಕ ಶಿಲ್ಪಿ ನಾಗೇಂದ್ರ ಸ್ಥಪತಿ', `ಕರ್ನಾಟಕದಲ್ಲಿ ಚಿತ್ರಕಲಾ ಬೆಳವಣಿಗೆ ಒಂದು ಸಮೀಕ್ಷೆ' ಹೀಗೆ ಚಿತ್ರಕಲೆಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ.