About the Author

ಲೇಖಕ ಡಾ. ಕೃಷ್ಣಮೂರ್ತಿ ಚಮರಂ ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚನ್ನಮಲ್ಲಿಪುರದವರು. ತಂದೆ-ಮಲಿಯಯ್ಯ, ತಾಯಿ- ರಂಗಮ್ಮ. ಪ್ರಾಥಮಿಕ ಶಿಕ್ಷಣವನ್ನು ಗುಂಡ್ಲುಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣವನ್ನು ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಪೂರೈಸಿದರು. ಆನಂತರ ಪಿಯುಸಿ ವಿಜ್ಞಾನ ವಿಷಯವನ್ನು ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಪೂರೈಸಿದ ಅವರು ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು, ನಂತರ ಮಾನಸ ಗಂಗೋತ್ರಿಯಲ್ಲಿ ಎಂ.ಎಸ್ಸಿ(ಸಸ್ಯಶಾಸ್ತ್ರ), ಎಂ.ಫಿಲ್(ಬೀಜ ತಂತ್ರಜ್ಞಾನ) ಮತ್ತು ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪಡೆದರು.

ವಿದ್ಯಾಭ್ಯಾಸದ ನಂತರ ಕೆಲಕಾಲ ‘ಕರ್ನಾಟಕ ರಿಮೋಟ್ ಸೆನ್ಸಿಂಗ್ ಇಲಾಖೆಯಲ್ಲಿ’ ಯೋಜನಾ ವಿಜ್ಞಾನಿಯಾಗಿ, ಮೈಸೂರಿನ ಎಸ್.ಎಂ.ಎಸ್ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು ಆನಂತರದಲ್ಲಿ ದೇಜಮ್ಮ ಮಹಾವೀರ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ನಂತರದಲ್ಲಿ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಏಳು ವರ್ಷಗಳ ಕಾಲ ಅಥಿತಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿರುವ ಅವರು, ‘ಸಂವಾದ’ ಸರ್ಕಾರೇತರ ಸಂಸ್ಥೆಯಲ್ಲಿ ಯುವಜನ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆ ನಂತರದಲ್ಲಿ ಮೈಸೂರಿನ ‘ಆಂದೋಲನ’ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.

ಬಹುಜನ ಚಳವಳಿಯ ನಾಯಕರಾಗಿದ್ದ ಎಚ್.ಮೋಹನ್ ಕುಮಾರ್ ಮತ್ತು ಎನ್.ಮಹೇಶ್ ಅವರ ಒಡನಾಟದಿಂದಾಗಿ ವಿಜ್ಞಾನ ಕ್ಷೇತ್ರದಿಂದ ಸಂಪೂರ್ಣವಾಗಿ ವಿಮುಖರಾದ ಇವರು ಹೊಸರೀತಿಯ ಹೋರಾಟದ ಜೀವನ ಆರಂಭಿಸಿದರು. ಅಲ್ಲದೇ ಬಹುಜನ ವಿದ್ಯಾರ್ಥಿ ಸಂಘದ ಮೈಸೂರು ವಿಭಾಗಿಯ ಪ್ರಥಮ ಅಧ್ಯಕ್ಷರಾದರು. ನಂತರ ಬಹುಜನ ಸಮಾಜ ಪಕ್ಷದ ಮುಖವಾಣಿಯಾಗಿ ಆರಂಭವಾದ ‘ಸಮಾಜ ಪರಿವರ್ತನ’ ಪತ್ರಿಕೆಯ ಸಂಪಾದಕರಾಗಿ ವಿಚಾರಪೂರ್ಣ ಲೇಖನಗಳು ಮತ್ತು ಸಂಪಾದಕೀಯಗಳ ಮೂಲಕ ನಾಡಿನಾದ್ಯಂತ ಜನಪ್ರಿಯರಾದರು.

‘ಮ್ಯಾನೇಜ್‍ಮೆಂಟ್ ಆಫ್ ಸೀಡ್ ಬೋರ್ನ್ ಫಂಗಲ್ ಡಿಸೀಸಸ್ ಆಫ್ ಸನ್‍ಫ್ಲವರ್ ಗ್ರೋನ್ ಇನ್ ಕರ್ನಾಟಕ’ ಎಂಬ ವಿಷಯದ ಮೇಲೆ ಪ್ರೊ. ಎಸ್.ಆರ್.ನಿರಂಜನ (ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಗಳು) ಇವರ ಮಾರ್ಗದರ್ಶನದಲ್ಲಿ ನಡೆಸಿದ ಸಂಶೋಧನೆಗೆ ಮೈಸೂರು ವಿಶ್ವವಿದ್ಯಾನಿಲಯ 2004ರಲ್ಲಿ ಡಾಕ್ಟರೆಟ್ ಪದವಿ ನೀಡಿದೆ. ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕೃಷ್ಣಮೂರ್ತಿ ಅವರು ಸಮಾಜ ಪರಿವರ್ತನ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಲೇಖನ, ಅಂಕಣಗಳನ್ನು ಬರೆದಿದ್ದಾರೆ.

ಅಲ್ಲದೇ ಕನ್ನಡ ಸಾಹಿತ್ಯಕ್ಷೇತ್ರದಲ್ಲಿಯೂ ತಮ್ಮದೇ ಆದ ಅಸ್ಮಿತೆಯೊಂದನ್ನ ಕಟ್ಟಿಕೊಂಡಿರುವ ಅವರು ‘ಮನಾಬ್ಧಿ’ (ಕಥಾ ಸಂಕಲನ), ‘ಪರಿವರ್ತನ’ (ಸಂಪಾದಿತ ಕವನ ಸಂಕಲನ), ‘ಬುದ್ಧನ ಮಾರ್ಗದಲ್ಲಿ’(ಕವನ ಸಂಕಲನ), ‘ಅಧಿಕಾರಕ್ಕಾಗಿ ಸಂಘಟಿತರಾಗಿ’ (ಅನುವಾದ. ಮೂಲ: ಡಾ.ಅಂಬೇಡ್ಕರ್), ‘ ಜಗತ್ತು ಕಂಡ ಅಪ್ರತಿಮ ರಾಜನೀತಿಜ್ಞ ದಾದಾಸಾಹೇಬ್ ಕಾನ್ಶಿರಾಮ್’ (ಲೇಖನ ಸಂಗ್ರಹಗಳು), ‘ಪರಿವರ್ತನ ಕಾವ್ಯ’ (ಸಂಪಾದಿತ ಕವನ ಸಂಕಲನ), ‘ಅಂಬೇಡ್ಕರ್‍ವಾದ ಎಂದರೇನು?’ (ಅಂಬೇಡ್ಕರ್ ವಿಚಾರಧಾರೆಗಳನ್ನು ಕುರಿತ ಲೇಖನಗಳ ಸಂಗ್ರಹ), ‘ಭೀಮಮಾರ್ಗ’ (ಲೇಖನಗಳ ಸಂಗ್ರಹ), ‘ಉರುಳುತಿದೆ ಧಮ್ಮಚಕ್ರ’ (ಲೇಖನಗಳ ಸಂಪಾದಿತ ಕೃತಿ), ‘ಅನಾವರಣ’ (ಸಂಪಾದಕೀಯ ಬರಹಗಳು), ‘ನೀಲಾಕಾಶ’ (ಅಂಕಣ ಬರಹಗಳು), ‘ಪರಿವರ್ತನೆಯ ಹೆಜ್ಜೆಗಳು’ (ಲೇಖನಗಳ ಸಂಗ್ರಹ), ‘ಪರಿವರ್ತನೆಯೆಡೆಗೆ’ (ಲೇಖನಗಳ ಸಂಗ್ರಹ), ‘ಜೋಕ್ ಬುಕ್’ (ಹಾಸ್ಯ ಬರಹಗಳ ಸಂಗ್ರಹ), ‘ಪ್ರೀತಿಯ ಅರಸಿ’ (ಕಾದಂಬರಿ), ‘ಅಂಬೇಡ್ಕರ್‍ವಾದಿ ಅಭಿವ್ಯಕ್ತಿ ಸ್ವಾತಂತ್ರ್ಯ (ಸಂಪಾದಕೀಯ ಬರಹಗಳು), ‘ವಿಜಯಕ್ಕನ ವಿಚಾರ ಲಹರಿ’ (ವಿಜಯಕ್ಕ ಅವರ ಬರಹಗಳ ಸಂಪಾದನೆ), ‘ಭಾರತೀಯರೆಲ್ಲರ ಮಹಾಬೆಳಕು ಬಾಬಾಸಾಹೇಬ್ ಅಂಬೇಡ್ಕರ್’(ಜೀವನ ಚರಿತ್ರೆ), ‘ಭಾರತ ಭಾಗ್ಯವಿಧಾತ’ (ಡಾ.ಅಂಬೇಡ್ಕರ್ ಬಹುಮುಖ ವ್ಯಕ್ತಿತ್ವದ ಪರಿಚಯ), ‘ಜೈ ಭೀಮ್’ (ಲೇಖನಗಳ ಸಂಗ್ರಹ), ‘ಮೋದಿ: ಭ್ರಮೆ ಮತ್ತು ವಾಸ್ತವ’ (ಲೇಖನಗಳ ಸಂಗ್ರಹ), ‘ಮಾಧ್ಯಮ ಮಾರ್ಗ’ (ಪತ್ರಿಕಾ ವರದಿ ಮತ್ತು ಅಂಕಣಗಳ ಸಂಗ್ರಹ), ‘ಪತ್ರಾಂದೋಲನ’ (ಆಂದೋಲನ ಪತ್ರಿಕೆಗೆ ಬರೆದ ಪತ್ರಗಳು ಮತ್ತು ಲೇಖನಗಳ ಸಂಗ್ರಹ) ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ 25ಕ್ಕೂ ಹೆಚ್ಚಿನ ಕೃತಿಗಳನ್ನು ಪ್ರಕಟಿಸಿದ್ದಾರೆ.

ಕೃಷ್ಣಮೂರ್ತಿ ಚಮರಂ

(08 Jan 1974)