ಪ್ರಾಚೀನ ದೇಗುಲಗಳ ಬಗ್ಗೆ ಇಂದಿನ ದಿನದಲ್ಲಿ ಹೇಳುವಾಗ ಕನ್ನಡಿಗರಿಗೆ ಥಟ್ ಅಂತ ನೆನಪಾಗುವ ಹೆಸರು ಕೆಂಗೇರಿ ಚಕ್ರಪಾಣಿ. ಕನ್ನಡ ನಾಡಿನ ಮೂಲೆ ಮೂಲೆಯಲ್ಲಿರುವ ದೇಗುಲಗಳನ್ನೆಲ್ಲಾ ಸುತ್ತಿ ಅದರ ದೃಶ್ಯದರ್ಶನ ಸೌಭಾಗ್ಯವನ್ನು ಎಲ್ಲ ಕನ್ನಡಿಗರಿಗೆ ಮುಕ್ತವಾಗಿ ನೀಡುತ್ತಿರುವ ಕೆಂಗೇರಿ ಚಕ್ರಪಾಣಿಯವರದು ಸರಳ ಸಜ್ಜನಿಕೆಯಿಂದ ಕೂಡಿದ ವಿಶಾಲ ಮನಸ್ಸು. ಬಿ ಎಸ್ ಎನ್ ಎಲ್ ಕೇಂದ್ರದಲ್ಲಿ ದೂರಸಂಪರ್ಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ನಿವೃತ್ತರಾಗಿರುವ ಕೆಂಗೇರಿ ಚಕ್ರಪಾಣಿ ಅವರಿಗೆ ಈ ಹವ್ಯಾಸ ತಮ್ಮ ಸಹೋದ್ಯೋಗಿಗಳೊಂದಿಗೆ ವಿವಿಧ ಪ್ರಾಚೀನ ದೇಗುಲಗಳಿರುವ ಊರುಗಳಿಗೆ ಪ್ರವಾಸ ಹೋಗುವುದರ ಮೂಲಕ ಮೊದಲ್ಗೊಂಡಿತು. ಹೀಗೆ ಮೊದಲ್ಗೊಂಡ ಪ್ರವಾಸ ಚಕ್ರಪಾಣಿ ಮತ್ತು ಅವರ ಸಹೋದ್ಯೋಗಿ ಗೆಳೆಯರಿಗೆ ಒಂದು ನಿರಂತರ ಸಂಚಾಲನಾ ಪ್ರಕ್ರಿಯೆಯಾಗಿ ಸಾಗುತ್ತಿದ್ದಂತೆ ಚಕ್ರಪಾಣಿ ಅವರಿಗೆ ತಾವು ನೋಡುತ್ತಾ ಬಂದ ಪ್ರತಿ ಶಿಲ್ಪದ ಬಗ್ಗೆಯೂ ತೀವ್ರವಾದ ಆಸಕ್ತಿ ತುಂಬಿಕೊಳ್ಳುತ್ತಾ, ಅದು ಅವರ ಕ್ಯಾಮೆರಾ ಕಣ್ಣಿನಿಂದ ಹೆಚ್ಚು ಹೆಚ್ಚು ಸೆರೆಯಾಗುತ್ತಾ, ಮುಂದೆ ವ್ಯಾಪಕವಾಗಿ ಚಿತ್ರಪ್ರದರ್ಶನಗಳ ಮೂಲಕ ಜನಸಾಗರವನ್ನೂ ತಲುಪುತ್ತಾ ಸಾಗಿದೆ. ‘ದೇಗುಲಗಳ ದಾರಿ’ ಎಂಬ ಅವರ ಕೃತಿ ಉತ್ತಮ ವಿಮರ್ಶೆಗಳನ್ನು ಪಡೆಯುವುದರ ಜೊತೆಗೆ ಸಹಸ್ರಾರು ಓದುಗರ ಮನೆ-ಮನಗಳನ್ನು ಮುಟ್ಟಿವೆ. ಚಕ್ರಪಾಣಿ ಅವರೊಂದಿಗೆ ‘ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ತಂಡ’ ಸದಾ ಜೊತೆಗಿದೆ. ಜೊತೆಗೆ ನಾಡಿನ ಅನೇಕಾನೇಕ ಆಸಕ್ತರು ಇವರೊಂದಿಗೆ ಹೆಚ್ಚು ಹೆಚ್ಚು ಸೇರ್ಪಡೆಗೊಳ್ಳುತ್ತಲೂ ಇರುತ್ತಾರೆ. ಹೀಗೆ ಅವರು ತಮ್ಮ ಆತ್ಮೀಯ ಆಸಕ್ತ ಕೂಟದೊಂದಿಗೆ ಪ್ರಾಚೀನ ದೇವಾಲಯಗಳಿಗೆ ಬಿಡುವಿನ ದಿನಗಳಲ್ಲಿ ಪ್ರವಾಸ ಹೋಗುತ್ತಾರೆ. ದೇವಾಲಯದ ಇತಿಹಾಸ, ಮಾಹಿತಿ ಸೇರಿದಂತೆ ಇನ್ನಿತರೆ ಮಾಹಿತಿಯ ಪ್ರವಾಸಿ ಕೈಪಿಡಿಯನ್ನು ಮುದ್ರಿಸಿ ಉಚಿತವಾಗಿ ಪ್ರವಾಸಿಗರಿಗೆ ಹಂಚುತ್ತಾರೆ.