About the Author

ಸಾಹಿತಿ, ಅಂಕಣಗಾರ್ತಿ ಕಮಲಾ ಹೆಮ್ಮಿಗೆ ಅವರು ಹುಟ್ಟಿದ್ದು 20  ನವೆಂಬರ್, 1952ರಂದು, ಮೈಸೂರು ಜಿಲ್ಲೆಯ ಹೆಮ್ಮಿಗೆಯಲ್ಲಿ. ಪ್ರತಿಭಾವಂತ ಬರಹಗಾರ್ತಿ. 1973ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಜಾನಪದವನ್ನು ಮುಖ್ಯವಿಷಯವನ್ನಾಗಿ ಆರಿಸಿಕೊಂಡು ಪ್ರಥಮ ದರ್ಜೆಯಲ್ಲಿ ಎಂ.ಎ.ಪದವಿಯನ್ನು ಪಡೆದವರು. ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ದತಿಯ ಮೇಲೆ ಮಹಾಪ್ರಬಂಧ ರಚಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಭಾಷಾಂತರ ಡಿಪ್ಲೊಮಾ ಪಡೆದಿದ್ದಾರೆ. ನನ್ನ ಸಂಗಾತಿ ಎಂದರೆ ಒಂಟಿತನ ಎನ್ನುವ ಕಮಲಾ ಹೆಮ್ಮಿಗೆ I Think i am addicted to it ಎನ್ನುತ್ತಾರೆ. ಅಡಿಗ, ಅನಂತಮೂರ್ತಿ, ಶಾಂತಿನಾಥ ದೇಸಾಯಿ ಮೊದಲಾದವರ ಸಾಹಿತ್ಯಕ ಪ್ರಭಾವ ಇವರ ಮೇಲಿದೆ. 2023 ಸೆಪ್ಟೆಂಬರ್ 24 ರವಿವಾರದಂದು ನಿಧನರಾದರು.

ನವ್ಯ ಸಂವೇದನೆಯ ಅವರ ಕತೆ. ಕವಿತೆಗಳಲ್ಲಿ ಒಂಟಿತನದ ಸ್ಥಿತಿ ಗುಪ್ತವಾಗಿ ಹರಡಿಕೊಂಡಿದೆ. ಗಾಢವಾಗಿ ಉಳಿಯದ ಸಂಬಂಧಗಳು, ಹಲಬಗೆಯ ವಂಚನೆಗಳು ಹಾಗೂ ಏಕಾಕಿತನದ ಸುಪ್ತ ಆಕರ್ಷಣೆ ಎಲ್ಲವೂ ಹೆಮ್ಮಿಗೆ ಅವರನ್ನು ತಮ್ಮ ಪಾಡಿಗೆ ತಾವು ಸ್ವತಂತ್ರವಾಗಿ ಬದುಕುವಂತೆ ಪ್ರೇರೇಪಿಸಿವೆ ಎಂದು ತೊರುತ್ತದೆ. 

ಅನಾಥಪ್ರಜ್ಞೆ ಹಾಗೂ ರಮ್ಯಪ್ರಜ್ಞೆಗಳೆರಡೂ ಒಟ್ಟಿಗೆ ಕಮಲಾ ಅವರ ಕವಿತೆಗಳಲ್ಲಿ ಕಾಣಿಸಿಕೊಳ್ಳುವ ರೀತಿ ಕುತೂಹಲಕರ. ಕನ್ನಡ ಸಾಹಿತ್ಯ ಲೋಕಕ್ಕೆ ಹಲಬಗೆಯ ಕೊಡುಗೆಗಳನ್ನು ನೀಡಿರುವ ಇವರ ಕೃತಿಗಳು- ಪಲ್ಲವಿ, ವಿಷಕನ್ಯೆ, ಮುಂಜಾನೆ ಬಂದವನು, ನೀನೆ ನನ್ನ ಆಕಾಶ, ಮರ್ಮರ, ಕರುಳ ಸಂವಾದ ಕಾವ್ಯಗಳಾದರೆ, ಅವರ ಕಾದಂಬರಿಗಳು- ಬದುಕೆಂಬ ದಿವ್ಯ, ಆಖ್ಯಾನ, ಕಿಚ್ಚಿಲ್ಲದ ಬೇಗೆ. ಕಮಲಾ ಹೆಮ್ಮಿಗೆಯವರು ಸಣ್ಣಕತೆಗಳು- ಮಾಘ ಮಾಸದ ದಿನ, ಬಿಸಿಲು ಮತ್ತು ಬೇವಿನ ಮರ, ನಾನು , ಅವನು ಮತ್ತು ಅವಳು, ಹನ್ನೊಂದು ಕಥೆಗಳು. ಅವರ ಸಂಶೋಧನಾ ಕೃತಿಗಳು- ಲಾವಣಿ-ಒಂದು ಹಕ್ಕಿ ನೋಟ, ಸವದತ್ತಿ ಎಲ್ಲಮ್ಮನ ಜಾತ್ರೆ, ಪಂಚಮುಖ, ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ಧತಿ: ಒಂದು ಅಧ್ಯಯನ. ಇಷ್ಟೇ ಅಲ್ಲದೆ, ಅನುವಾದ, ಸಂಪಾದನಾ ಗ್ರಂಥಗಳನ್ನು ರಚಿಸಿದ್ದು, ಅಂಕಣಗಾರ್ತಿಯಾಗಿಯೂ ಚಿರಪರಿಚಿತ. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ-1991 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕೆ.ಎಸ್.ಎನ್. ಪ್ರಶಸ್ತಿ, 2004 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಸಾಹಿತ್ಯ ಪ್ರಶಸ್ತಿ, 2004-05ನೇ ವರ್ಷದ ಕರ್ನಾಟಕ ರಾಜ್ಯ ಸರಕಾರದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ, ಪ್ರಶಸ್ತಿಗಳು ಸಂದಿವೆ. 

ಕಮಲಾ ಹೆಮ್ಮಿಗೆ

(20 Nov 1952-24 Sep 2023)