ಕನ್ನಡ ಮತ್ತು ಮಲೆಯಾಳಂ ಸಾಹಿತ್ಯದ ಕೊಂಡಿಯಂತೆ ಭಾಷೆಗಳನ್ನು ಬೆಸೆದ ಲೇಖಕ ಕರುಣಾಕರನ್. ಕೇರಳದ ತಲಚೇರಿಯವರು. ಅವರು ಹುಟ್ಟಿದ್ದು ಬೆಳೆದದ್ದು ಕೊಡಗಿನ ವಿರಾಜಪೇಟೆಯಲ್ಲಿ. ತಂದೆ ಕಲ್ಲಿಶಂಕರನ್. ತಾಯಿ- ಶ್ರೀಮತಿ. ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಓದಿದ ನಂತರ ಬಿ.ಎ. ಆನರ್ಸ್ ಓದಲು ಮೈಸೂರಿಗೆ ಬಂದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ. ಎ. ಪದವೀಧರರು.
ಲಕ್ಷ್ಮೀನಾರಾಯಣ ಭಟ್ಟ, ಅ.ರಾ.ಮಿತ್ರ, ಹಂಸನಾಗರಾಜಯ್ಯ, ಕಮಲ ಹಂಪನಾ, ಜಿ. ಪರಶಿವಮೂರ್ತಿ, ಪಾ.ಶ. ಶ್ರೀನಿವಾಸ್ ಮುಂತಾದವರ ಒಡನಾಟದಲ್ಲಿ, ಸಾಹಿತ್ಯ ಚರ್ಚೆಯಲ್ಲೇ ಬೆಳೆದ ಕರುಣಾಕರನ್‌ವರಿಗೆ ಸಾಹಿತ್ಯದ ಗೀಳು ಹಿಡಿದಿದ್ದು ಹೆಚ್ಚೇನಲ್ಲ.
ಮಾತೃ ಭಾಷೆ ಮಲೆಯಾಳಂ ಕೂಡಾ ಬರುತ್ತಿದ್ದು, ಹಲವಾರು ಮಿತ್ರರು ಮಲೆಯಾಳಂ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವಂತೆ ಪ್ರೇರೇಪಿಸಿತು. ಸಣ್ಣಕಥೆಗಳ ಅನುವಾದವನ್ನು ಪ್ರಾರಂಭಿಸಿದರು. ಮೊದಲು ಅನುವಾದಿಸಿದ ಕಥೆ ‘ಕುಡುಗೋಲಿನ ಅಭಿಮಾನ’. ನಂತರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪೊಟ್ಟಿಕ್ಕಾಟ್‌ರವರ ‘ಪ್ರೇಮ ಲೇಖನಂ’ ಕತೆಯನ್ನು ಅನುವಾದಿಸಿದರು. ಇವರು ಮಲೆಯಾಳಂನಿಂದ ಅನುವಾದಿಸಿದ ಬಹಳಷ್ಟು ಕಥೆಗಳು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಕನ್ನಡದ ಹಲವು ಮಹತ್ವದ ಕೃತಿಗಳನ್ನು ಮಲೆಯಾಳಂಗೆ ಕೂಡ ಅನುವಾದಿಸಿದ್ದಾರೆ. ಅವುಗಳಲ್ಲಿ ಅನಂತಮೂರ್ತಿಯವರ ‘ಘಟಶ್ರಾದ್ಧ’, ಸೂ. ಸುಬ್ರಹ್ಮಣ್ಯಂರವರ ‘ರಕ್ತದ ಕತೆ’ ಮುಂತಾದವು. ನಿರಂಜನರವರ ಪ್ರಖ್ಯಾತ ಕಾದಂಬರಿ ‘ಚಿರಸ್ಮರಣಿ’ಯನ್ನು ಮಲೆಯಾಳಂಗೆ ಅನುವಾಸಿದರಾದರೂ ಹಸ್ತಪ್ರತಿಯನ್ನು ತಿದ್ದಲು ತೆಗೆದು ಕೊಂಡವರು ಹಸ್ತಪ್ರತಿಯನ್ನೇ ಕಳೆದುಬಿಟ್ಟಿದ್ದರು. ಹೀಗಾಗಿ ‘ಚಿರಸ್ಮರಣಿ’ ಮಲೆಯಾಳಂ ಭಾಷೆಯಲ್ಲಿ ಪ್ರಕಟವಾಗುವ ಅದೃಷ್ಟವನ್ನು ಕಳೆದುಕೊಂಡಿತು.
ಸರ್ಕಸ್, ಗಂಡುಹೆಣ್ಣಾದಾಗ, ವಿಚಿತ್ರ ಪಂದ್ಯ, ಮಂಗಳ ಗ್ರಹಕ್ಕೆ ತಲುಪಿದಾಗ ಮುಂತಾದ ಅನುವಾದಗಳ ಜೊತೆಗೆ ಎರಡು ಪತ್ತೆದಾರಿ ಕಾದಂಬರಿಗಯೂ ಸೇರಿದಂತೆ ಹತ್ತು ಕಾದಂಬರಿಗಳು, ಸುಮಾರು 300 ಕ್ಕೂ ಹೆಚ್ಚು ಕತೆಗಳನ್ನು ಮಲೆಯಾಳಂನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಎಂ.ಟಿ.ವಾಸುದೇವನ್ ನಾಯರ್‌ರವರ ‘ವಾರಣಾಸಿ’, ಕರುಣಾಕರನ್‌ರವರು ಅನುವಾದಿಸಿದ ಕೊನೆಯ ಕಾದಂಬರಿ. 1963 ರಲ್ಲಿ ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಜೀವನವನ್ನು ಆರಂಭಿಸಿ ಸುಮಾರು 22 ವರ್ಷಗಳ ಕಾಲ ಬೋಧನಾ ವೃತ್ತಿಯಲ್ಲಿದ್ದು ಸ್ವ-ಇಚ್ಛೆಯಿಂದ ನಿವೃತ್ತರಾಗಿ ಕೊಡಗಿನ ಸಿದ್ಧಾಪುರದ ಬಳಿಯ ಇಂಜಲಗೆರೆಯ ಕಾಫಿ ಎಸ್ಟೇಟ್‌ನಲ್ಲಿ ಪತ್ನಿ ಶೈಲಜಾರೊಡನೆ ವಿಶ್ರಾಂತಿ ಪಡೆಯತೊಡಗಿದರು.
ದೇಹಾರೋಗ್ಯ ಆಗಾಗ್ಗೆ ಕೈಕೊಡುತ್ತಾ ಬಂದರೂ ಸಾಹಿತ್ಯದ ಕೆಲಸ ನಿಲ್ಲಸದೇ ಕನ್ನಡ-ಮಲೆಯಾಳಂ ಭಾಷೆಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ ಕರುಣಾಕರನ್ ಅವರು 2006ರಲ್ಲಿ ನಿಧನರಾದರು.