ಸುಗಮ ಸಂಗೀತ ಗಾಯಕ ಪ್ರಭುಪ್ರಸಾದರು ಮೂಲತಃ ದಾವಣಗೆರೆಯವರು. ತಂದೆ ಬಿ.ಎಸ್. ಕುರುವತ್ತಿ ಮತ್ತು ತಾಯಿ ಸರ್ವಮಂಗಳಾ. ದಾವಣಗೆರೆಯಲ್ಲಿಯೇ ಪ್ರಾರಂಭಿಕ ಶಿಕ್ಷಣ, ನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜಿನಲ್ಲಿ ಅಧ್ಯಯನ ನಡೆಸಿ (ಮುಂಬೈ ವಿ.ವಿ.) ಎಂ.ಎ. ಪೂರ್ಣಗೊಳಿಸಿದರು. ಶಿವಮೊಗ್ಗ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಯುವರಾಜ ಕಾಲೇಜಿನಲ್ಲಿ ರೀಡರ್ ಆಗಿ, ಮಹಾರಾಣಿ ಕಾಲೇಜಿನಲ್ಲಿ ಪ್ರೊಫೆಸರಾಗಿ, ಚಿತ್ರದುರ್ಗ, ತುಮಕೂರಿನ ಸರಕಾರಿ ಪ್ರಥಮ ದರ್ಜೆ ಸೈನ್ಸ್ ಕಾಲೇಜು, ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಸುಗಮ ಸಂಗೀತ ಗಾಯಕರಾಗಿ, ಸಾಹಿತ್ಯ, ಸಂಗೀತ, ನಾಟಕ, ಹಾಸ್ಯ ಹವ್ಯಾಸಗಳಾಗಿವೆ. ದೇಗುಲಗಳ ದಾರಿಯಲ್ಲಿ (ಪ್ರವಾಸ ಕಥನ), ನಾದಸೇತು ಮತ್ತು ಇತರ ನಾಟಕಗಳು (ರೇಡಿಯೋ ನಾಟಕಗಳ ಸಂಕಲನ). ‘ಹಾಡೋಣ ಬಾ’ (ಭಾವಗೀತೆಗಳಿಗೆ ಸ್ವರ ಸಂಯೋಜಿಸಿ ರಾಗ-ತಾಳ-ಸ್ವರ ಲಿಪಿ ಹಾಕಿ ಪ್ರಕಟಿಸಿದ ಕೃತಿ), ‘ರಂಗ-ಅಂತರಂಗ (ರಂಗಭೂಮಿಯ ಕೊಟ್ಟೂರ ಬಸವಯ್ಯನವರ ಆತ್ಮಕಥೆ ನಿರೂಪಣೆ) ಸರ್ವಜ್ಞ (ಇಂಗ್ಲಿಷ್‌ನಲ್ಲಿ), ರಾಣಿ ದುರ್ಗಾವತಿ, ವಿಷ್ಣುವರ್ಧನ, ಶಿರಡಿ ಸಾಯಿಬಾಬಾ (ಭಾರತ-ಭಾರತಿ ಪುಸ್ತಕ ಸಂಪದ), ನಾ. ಕಸ್ತೂರಿಯವರ LOVING GOD ಕೃತಿಯನ್ನು ಎರಡು ಸಂಪುಟಗಳಲ್ಲಿ ಅನುವಾದಿಸಿದ್ದಾರೆ. ‘ದೇವನೊಲಿದ ಜೀವ’ (ಎಚ್.ಎಲ್. ಕೇಶವಮೂರ್ತಿಯವರೊಡನೆ ಸಂಪಾದಿತ), ಹಾಸ್ಯ ಕಸ್ತೂರಿ (ನಾ. ಕಸ್ತೂರಿಯವರ ಆಯ್ದ ಲೇಖನಗಳು) ಪ್ರಕಟಿತ ಕೃತಿಗಳು. ’ದೇಗುಲಗಳ ದಾರಿಯಲ್ಲಿ’ ಪ್ರವಾಸ ಕಥನಕ್ಕೆ ಪುಸ್ತಕ ಪ್ರಶಸ್ತಿ, ಹಂಸಜ್ಯೋತಿ ಸಂಸ್ಥೆಯಿಂದ ಹಂಸ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.