ಕನ್ನಡದ ಬಗ್ಗೆ ಅಪಾರ ಪ್ರೀತಿಯುಳ್ಳ ಜಯಪ್ರಕಾಶ್ ನಾಗತಿಹಳ್ಳಿ ಅವರು ಮೂಲತಃ ಸಕ್ಕರೆ ನಾಡಿನ ಮಂಡ್ಯದವರು. ಇವರು ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ಪದವಿ, ತಾಂತ್ರಿಕ ಶಿಕ್ಷಣ ಮಂಡಳಿಯ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ, ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಪದವಿ ಪಡೆದುಕೊಂಡಿದ್ದಾರೆ. ಬೆಂಗಳೂರು ದೂರದರ್ಶನದ ಮಾರ್ಗವಾಚಕರಾಗಿ, ಚಂದನ ವಾಹಿನಿಯ ಸಂದರ್ಶಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಬೆಂಗಳೂರು ದಕ್ಷಿಣ ಜೇಸೀಸ್‌ನ ಅಧ್ಯಕ್ಷರಾಗಿದ್ದ ಇವರು, ಭಾರತೀಯ ಜೇಸೀಸ್‌ನ ವಲಯ-14ರ ಸಂಯೋಜನಾಧಿಕಾರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ವ್ಯಕ್ತಿತ್ವ ವಿಕಸನದ ಬಗೆಗೆ ಕನ್ನಡದಲ್ಲಿ ಪ್ರಪ್ರಥಮವಾಗಿ ‘ನಡೆ-ನುಡಿ' ವ್ಯಕ್ತಿತ್ವ ವಿಕಸನದ ಅಲೆಗಳು ಎಂಬ ಧ್ವನಿಸುರುಳಿಯನ್ನು ಹೊರತರುವುದು ಇವರ ಹೆಗ್ಗಳಿಕೆ. ಆನಂತರ ವೇಳೆಯ ವೈಯಾರ, ಜೀವನದ ಇಂಥ ಆತ್ಮ ವಿಶ್ವಾಸ ಎಂಬ ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ‘ನುಡಿಗನ್ನಡಿ, ಸೋಲುಗಳಿಗೆ ಅಂಜದಿರಿ, ಕೀಳರಿಮೆ ಏನು? ಏಕೆ? ಹೇಗೆ?, ಅನುಕ್ಷಣ ಅನುಭವಿಸಿ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.