ಹೆಚ್. ಸಿದ್ದಲಿಂಗಯ್ಯ ಅವರು ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಹೊಸಹಳ್ಳಿ ಗ್ರಾಮದವರು. ಅವರದ್ದು ರೈತ ಕುಟುಂಬ. ಹಳ್ಳಿಯಲ್ಲಿ ಪ್ರೌಢಶಾಲೆ ಶಿಕ್ಷಣ, ನಂತರ, ಕಾಲೇಜು ವಿದ್ಯಾಭ್ಯಾಸವನ್ನು ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮೈಸೂರಿನ ಮಹಾರಾಜಾ ಕಾಲೇಜುಗಳಲ್ಲಿ ಪೂರ್ಣಗೊಳಿಸಿದರು. ಡಾ. ಡಿ.ಎಲ್. ನರಸಿಂಹಾಚಾರ್, ತೀ. ನಂ. ಶ್ರೀಕಂಠಯ್ಯ, ತ.ಸು. ಶಾಮರಾವ್, ಡಾ. ಎಲ್. ಬಸವರಾಜು ಮುಂತಾದ ಅದ್ವಿತೀಯ ವಿದ್ವಾಂಸರ ಮಾರ್ಗದರ್ಶನದಲ್ಲಿ ಕನ್ನಡ ಆನರ್ಸ್ ಮತ್ತು ಎಂ.ಎ. ಪದವೀಧರರು. ಮೈಸೂರು ಧರ್ಮಪ್ರಕಾಶ ಡಿ. ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಈಗ ನಿವೃತ್ತರು. ತಮ್ಮ ಸಾಹಿತ್ಯಕ ಪ್ರವೃತ್ತಿಯನ್ನು ಮುಂದುವರಿಸಿದ್ದು, ವ್ಯಾಕರಣ ಕುರಿತು 'ಸಮಗ್ರ ಕನ್ನಡ ಹಾಗೂ ಪಂಪಭಾರತದ ಗದ್ಯಾನುವಾದ 'ವಚನ ಪಂಪ ಭಾರತವನ್ನು ರಚಿಸಿದ್ದಾರೆ. ಜೈಮಿನಿ ಭಾರತದ ಸಮಗ್ರ ಗದ್ಯಾನುವಾದ ಕೃತಿ ರಚಿಸಿದ್ದಾರೆ.