ಹ.ಚ. ನಟೇಶ ಬಾಬು ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹರಳಾಪುರದವರು. ಓದಿದ್ದು ಕನ್ನಡ ಎಂ.ಎ, ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವೀಧರರು. ಪ್ರಸ್ತುತ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ತನಕ ‘ಸಿರಿ’ (ತುಮಕೂರು ಜಿಲ್ಲಾ ಕವಿಗಳ ಕವನ ಸಂಕಲನ ಸಂಪಾದನೆ), ಬ್ರಿಟನ್ ವ್ಯಂಗ್ಯಚಿತ್ರಕಾರರು, ಅಮೆರಿಕ ವ್ಯಂಗ್ಯಚಿತ್ರಕಾರರು, ಭಾರತದ ವ್ಯಂಗ್ಯಚಿತ್ರಕಾರರು(ಖ್ಯಾತ ಕಾರ್ಟೂನ್ ಕಿಂಗ್ ಗಳಿಗೆ ಸಂಬಂಧಿಸಿದ ಮೂರು ಪುಸ್ತಕಗಳು), ಅಮಿತಾಭ್ ಬಚ್ಚನ್(ವಿಶ್ವವಿಖ್ಯಾತರ ವ್ಯಕ್ತಿಚಿತ್ರ ಮಾಲೆಗಾಗಿ ಕಿರು ಪುಸ್ತಕ), ಸಿಂಗ್ ಈಸ್ ಕಿಂಗ್(ಡಾ.ಮನಮೋಹನ್ ಸಿಂಗ್ ಜೀವನ-ಸಾಧನೆ), ಗಿಫ್ಟೆಡ್(ವಿಶೇಷ ಚೇತನರ ಸ್ಫೂರ್ತಿದಾಯಕ ಕತೆಗಳ ಅನುವಾದ), ಸೇರಿದಂತೆ 7 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2016ರಲ್ಲಿ ಗಿಫ್ಟೆಡ್ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಸಂದಿದೆ.