ಸುಗಮ ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಹೆಚ್.ಆರ್. ಲೀಲಾವತಿ ಜನಿಸಿದ್ದು 1935 ಫೆಬ್ರುವರಿ 8ರಂದು. ಮೂಲತಃ ಬೆಂಗಳೂರಿ ನವರು. ಬಾಲ್ಯದಿಂದಲೇ ಸಂಗೀತ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು.
ಇವರ ಕನ್ನಡ ಹಾಡುಗಳು ಮಾಸ್ಕೊ ರೇಡಿಯೋ ಕೇಂದ್ರದಿಂದಲೂ ಪ್ರಸಾರವಾಗಿವೆ. ಸಿನಿಮಾಗಳಿಗೂ ಹಾಡಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಮದ್ರಾಸಿನಲ್ಲಿ ನಡೆದ ಸಂಗೀತ ಸಮ್ಮೇಳನ, ಅಮೆರಿಕದ ಟ್ರೆನ್‌ಟನ್ ಪ್ರಥಮ ವಿದೇಶಿ ಕನ್ನಡ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಕಲಾತಿಲಕ, ರಾಜ್ಯೋತ್ಸವ ಪ್ರಶಸ್ತಿ, ಶಿಶುನಾಳ ಷರೀಫ ಪ್ರಶಸ್ತಿ, ಡಾ. ಎಸ್.ಕೆ. ಕರೀಂಖಾನ್ ಪ್ರಶಸ್ತಿ ಮುಂತಾದ ಗೌರವಗಳು ಲಭಿಸಿವೆ.
ಇವರ ಪ್ರಮುಖ ಕೃತಿಗಳೆಂದರೆ ಲಹರಿ, ಚಿತ್ತಾರ, ಸಾವಿರದ ಸವಿನಾದ, ಶ್ರೀ ಹರಿಗೀತೆ, ಅವಡು ಕಚ್ಚಿದ ಬೆಳೆ (ಕವನ ಸಂಕಲನಗಳು); ಎಂಟು ಕಥೆಗಳು (ಕಥಾಸಂಕಲನ); ಟುವ್ವಿ ಟುವ್ವಿ, ಸೋಮಿಯ ಕಥೆಗಳು (ಮಕ್ಕಳ ಸಾಹಿತ್ಯ) ಮುಂತಾದವು.