About the Author

ಲೇಖಕ ಡಾ. ಗುರುಲಿಂಗಪ್ಪ ಶಂಕರಪ್ಪ ಧಬಾಲೆ ಅವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ (ಜನನ: 02-04-1967) ತೊಗಲೂರು ಗ್ರಾಮದವರು. ಸದ್ಯ, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆಯ ಸಿ.ಬಿ. ಖೇಡಗಿ ಬಸವೇಶ್ವರ ವಿಜ್ಞಾನ, ಆರ್.ವಿ. ವಾಣಿಜ್ಯ ಹಾಗೂ ಆರ್.ಜೆ. ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರು. ಅಂಬಿಗರ ಚೌಡಯ್ಯನ ವಚನಗಳು: ಒಂದು ಅಧ್ಯಯನ (1991) -ವಿಷಯವಾಗಿ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ, ಹಾಗೂ ಬೀದರ ಜಿಲ್ಲೆಯ ಅನುಭಾವಿ ಕವಿಗಳು ವಿಷಯವಾಗಿ ಮಹಾಪ್ರಬಂಧ ಮಂಡಿಸಿ ಪಿಎಚ್ ಡಿ ಪದವಿ ಪಡೆದಿದ್ದಾರೆ.

ಕೃತಿಗಳು: ಬೀದರ ಜಿಲ್ಲೆಯ ಅನುಭಾವಿ ಕವಿಗಳು, ಶರಣ ಅಂಬಿಗರ ಚೌಡಯ್ಯ, ಬೀದರ ಜಿಲ್ಲೆಯ ತತ್ವಪದಕಾರರು, ಹುಲಸೂರಿನ ಬಸವಕುಮಾರ ಶಿವಯೋಗಿ, ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟದ್ದೇವರು, ಗಡಿ ನಿಡಿಯ ಬೆಡಗು, ಶರಣ ಸೊಲ್ಲಾಪುರ, ಶರಣ ಶ್ರಾವಣ, ಬಸವ ಯೋಗಿ, ಕಲ್ಯಾಣ ದೀಪ್ತಿ, ಕನ್ನಡ-ಮರಾಠಿ ಬಾಂಧವ್ಯ: ಗಡಿ ಪ್ರದೇಶದ ಸಮಸ್ಯೆಗಳು, ಚೆನ್ನಬಸವ ಕಲ್ಯಾಣ, ವೀರ ಗಣಾಚಾರಿ ಅಂಬಿಗರ ಚೌಡಯ್ಯ, ಪಂಡಿತಾರಾಧ್ಯ ಚರಿತ್ರೆ ಸಂಗ್ರಹ (ವಿದ್ವಾಂಸರೊಂದಿಗೆ ಸಂಪಾದನೆ), ನಾಡಿನ ಪ್ರತಿಷ್ಠಿತ ದಿನಪತ್ರಿಕೆಗಳು, ಪಾಕ್ಷಿಕ-ಮಾಸ ಪತ್ರಿಕೆ, ಸ್ಮರಣ ಸಂಚಿಕೆಗಳಲ್ಲಿ ಇವರ ಕವಿತೆಗಳು ಹಾಗೂ ಲೇಖನಗಳು ಪ್ರಕಟವಾಗಿವೆ. ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಿ.ಎ.ದ್ವಿತೀಯ ಪಠ್ಯ ‘ಜಾಣವೀಣೇಯ ಹಿಡಿದು’ ಎಂಬ ಕೃತಿಯಲ್ಲಿಇವರ ‘ಕನ್ನಡ-ಮರಾಠಿ ಬಾಂಧವ್ಯ’ ಲೇಖನ ಪ್ರಕಟ, ಗುಲಬರ್ಗಾ ಆಕಾಶವಾಣಿ, ಡಿಡಿ ಚಂದನ, ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಆಕಾಶವಾಣಿ ಹಾಗೂ ಟಿ.ವಿ. ಮಾಧ್ಯಮಗಳಲ್ಲಿ ಇವರ ಚಿಂತನೆಗಳು ಪ್ರಸಾರವಾಗಿವೆ. 

ಸೇವೆಗಳು: ಮಹಾರಾಷ್ಟ್ರ ರಾಜ್ಯ ಪಠ್ಯಪುಸ್ತಕ ಸಮಿತಿ (2004-2016) ಸದಸ್ಯರು ಹಾಗೂ ಸಮನ್ವಯಕಾರರು, 9ನೇ ತರಗತಿಯಿಂದ 12ನೇ ತರಗತಿಯವರೆಗೆ ಪಠ್ಯಪುಸ್ತಕಗಳ ಸಂಪಾದಕರು, ಕೊಲ್ಲಾಪುರದ ಶಿವಾಜಿ ವಿ.ವಿ, ಸೊಲ್ಲಾಪುರ ವಿ.ವಿ, ಮುಂಬೈ ವಿ.ವಿ. ಅಭ್ಯಾಸ ಮಂಡಳಿ ಸದಸ್ಯರು ಹಾಗೂ ಗುಲಬರ್ಗಾ ವಿ.ವಿ. ಸ್ನಾತಕೋತ್ತರ ಕೇಂದ್ರದ ಅಭ್ಯಾಸ ಮಂಡಳಿ ಸದಸ್ಯರಾಗಿದ್ದರು. ಸೊಲ್ಲಾಪುರ ವಿ.ವಿ.ಯ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು, ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳು ಸಲ್ಲಿಸಿದ ಮಹಾಪ್ರಬಂಧಗಳ ಮೌಲ್ಯಮಾಪಕರೂ ಆಗಿದ್ದಾರೆ. ಸೊಲ್ಲಾಪುರ ವಿ.ವಿ. ಧನ ಸಹಾಯದಡಿ ‘ಅಕ್ಕಲಕೋಟೆ ತಾಲೂಕು: ಒಂದು ಸಾಂಸ್ಕೃತಿಕ ಅಧ್ಯಯನ’ ವಿಷಯವಾಗಿ .ಸಂಶೋಧನೆ ಕೈಗೊಂಡಿದ್ದಾರೆ.  ಮಹಾರಾಷ್ಟ್ರದ ನೆಲದಲ್ಲಿ ನಿಂತು ಕನ್ನಡದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯಕ-ಸಾಂಸ್ಕೃತಿಕ ಹಾಗೂ ಗಡಿನಾಡ ಸಮಸ್ಯೆ ಕುರಿತು ಹತ್ತು ಹಲವು ಕಾರ್ಯಕ್ರಮ/ಶಿಬಿರ/ವಿಚಾರ ಸಂಕಿರಣಗಳನ್ನು ಸಂಘಟಿಸಿದ್ದಾರೆ. .

ಪ್ರಶಸ್ತಿ-ಗೌರವಗಳು: ಹುಲಸೂರಿನ ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಶಿಕ್ಷಣ ಬಂಧು ಪ್ರಶಸ್ತಿ (2004)., ಬೇಲೂರಿನ ಉರಿಲಿಂಗ ಪೆದ್ದಿ ಮಠದ ಉರಿಲಿಂಗ ಪೆದ್ದಿ ಪ್ರಶಸ್ತಿ (2009), ಜಮಖಂಡಿಯ ಬಸವಜ್ಞಾನ ಗುರುಕುಲದಿಂದ ಗಡಿ ನಾಡಿನ ಬೆಳಕು ಪ್ರಶಸ್ತಿ (2012), ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಎಂಬ ಇವರ ಕೃತಿಗೆ ಗುಲಬರ್ಗಾ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ (2012), ಅಕ್ಕಲಕೋಟೆಯ ಮೈಕ್ರೋ ಸ್ಟಾರ್ ಪ್ರತಿಷ್ಠಾನದಿಂದ ಆದರ್ಶ ಸಾಹಿತಿ ಪ್ರಶಸ್ತಿ(2013), ಬೀದರ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ-2016), ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಸಾಹಿತ್ಯ ಪ್ರಶಸ್ತಿ-2017) ಲಭಿಸಿವೆ.

ಗುರುಲಿಂಗಪ್ಪ ಧಬಾಲೆ

(02 Apr 1967)