ಪತ್ರಕರ್ತ, ಬರಹಗಾರ ಗಿರೀಶ್ ತಾಳಿಕಟ್ಟೆ ಅವರು ಜನಿಸಿದ್ದು 1984 ನವೆಂಬರ್ 13ರಂದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಕಾವಲು ಇವರ ಹುಟ್ಟೂರು. ಉದ್ಯೋಗ ಸ್ಫೂರ್ತಿ, ಜಾಬ್‌ನ್ಯೂಸ್, ಗೌರಿ ಲಂಕೇಶ್ ವಾರಪತ್ರಿಕೆ ಮೊದಲಾದ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಇವರು ಪ್ರಸ್ತುತ, ಆರಕ್ಷಕ ಲಹರಿ ಮಾಸಪತ್ರಿಕೆಯ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಹೊರತರುತ್ತಿದ್ದ ಗೈಡ್ ಮಾಸಿಕದ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹವ್ಯಾಸ ಹಾಗೂ ಆಸಕ್ತಿಯಿಂದ ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಟರ್ನಿಂಗ್ ಪಾಯಿಂಟ್ (ವ್ಯಕ್ತಿ ವಿಕಸನ ಬರಹಗಳು), ಕಾಡುವ ಕತೆಗಳು, ನನ್ನ ಕೈಗಂಟಿದ ನೆತ್ತರು (ಅನುವಾದ), ಜೆನ್ ಕಥೆಗಳು, ಸ್ವಾತಂತ್ರ್ಯಪೂರ್ವ ಶಿಕಾರಿ ಕತೆಗಳು, ಆ 117ದಿನಗಳು, ಹಸಿರು ಹಾದಿಯ ಕಥನ, ಎಲ್ಲೆ ತೊರೆದ ಕಥೆಗಳು, ಡಿಟೆಕ್ಟಿವ್ ಸ್ಟೋರೀಸ್ ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚು ಕೃತಿಗಳನ್ನೂ, ’ಕ್ಷಮಿಸಿ ಇದು ಕವನ ಸಂಕಲನವಲ್ಲ’ ಎಂಬ ಕವನಗುಚ್ಛವನ್ನೂ ಪ್ರಕಟಿಸಿದ್ದಾರೆ.