ಗಾಯತ್ರಿ ನಾವಡ ಅವರು 1954 ಆಗಸ್ಟ್ 7ರಂದು ಉಡುಪಿಯ ಕೋಟೇಶ್ವರದಲ್ಲಿ ಜನಿಸಿದರು. ತಾಯಿ ಕಮಲಮ್ಮ, ತಂದೆ ಅನಂತಕೃಷ್ಣ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ತುಳು ಅಕಾಡೆಮಿಯ ಮಾಜಿ ಸದಸ್ಯರು ಆಗಿದ್ದರು.
ಇವರ ಪ್ರಮುಖ ಕೃತಿಗಳೆಂದರೆ ನಮ್ಮ ಹೆಣ್ಣುಮಗು, ವಿರಚನೆ, ಭಾರತೀಯ ಸ್ತ್ರೀವಾದ ಒಂದು ಸಂಕಥನ, ಮಹಿಳಾ ಸಂಕಥನ (ಮಹಿಳಾ ಅಧ್ಯಯನ), ಸಿರಿಕತೆ, ಕರಾವಳಿ ಜಾನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ಕರಾವಳಿ ಮಹಿಳಾ ಜನಪದ ಕಥೆಗಳು (ಜಾನಪದ), ತೇರು, ಸಾವಿರಾರು ಕೀರ್ತನೆಗಳು, ಕರಾವಳಿ ಮದುವೆ ಹಾಡುಗಳು (ಸಂಪಾದನೆ) ಮುಂತಾದವು.
ಗಾಯತ್ರಿ ಅವರಿಗೆ ಡಾ.ಪೀಟರ್ ಜೆ.ಕ್ಲಾಸ್ ಮಹಿಳಾ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಗುಂಡ್ಮಿ ಜಾನಪದ ರಾಜ್ಯ ಪ್ರಶಸ್ತಿ, ಮಹಿಳಾ ಸಂಶೋಧಕಿ ಪ್ರಶಸ್ತಿ, ಶಾಶ್ವತೀ ಸದೋದಿತಾ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.