ಕನ್ನಡ ಕೈಂಕರ್ಯಕ್ಕೆ ಸದಾ ಸಿದ್ಧ ಎನ್ನುವಂತೆ ಬದುಕಿನುದ್ದಕ್ಕೂ ಸಾಗಿದವರು ಗಂಗಾಧರ ಮಡಿವಾಳೇಶ್ವರ ತುರಮರಿಯವರು. 1827ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಜನಿಸಿದರು. ಆ ಕಾಲಾವಧಿಯಲ್ಲಿ ಮರಾಠಿ ಭಾಷೆಯ ಪ್ರಾಬಲ್ಯವಿದ್ದರೂ ಸಹ, ತಾಯಿನುಡಿಯ ಅಭಿಮಾನಿಯಾದ ಬಾಲಕ ಗಂಗಾಧರ ಅವರು ಕನ್ನಡವನ್ನೆ ಕಲಿಯಲು ಅಪೇಕ್ಷಿಸಿದ್ದರಿಂದ, ಅವರ ಮಹತ್ವಾಕಾಂಕ್ಷೆಯನ್ನು ಕಂಡು ಸಂತೋಷಗೊಂಡ ಗುರು ಮಡಿವಾಳೇಶ್ವರರು ಅವರಿಗೆ ಹಳಗನ್ನಡ ಹಾಗು ಸಂಸ್ಕೃತ ಕಾವ್ಯಗಳ ಅಭ್ಯಾಸ ಮಾಡಿಸಿದರು. ಗುರುಗಳ ನಿಧನದ ನಂತರ ತುರಮರಿಯವರು ತಮ್ಮ ಹೆಸರಿನ ಮುಂದೆ ಅವರ ಹೆಸರನ್ನೂ ಸಹ ಜೋಡಿಸಿಕೊಂಡು ಗಂಗಾಧರ ಮಡಿವಾಳೇಶ್ವರ ತುರಮರಿಯಾದರು.
ಧಾರವಾಡ ವಿಭಾಗದ ಜಿಲ್ಲಾಧಿಕಾರಿ 'ಎಲಿಯಟ್' ಮುಂಬಯಿ ಪ್ರಾಂತದ ಶಿಕ್ಷಣಾಧಿಕಾರಿ “ವಿಲಿಯಮ್ ಅಲೆನ್ ರೆಸೆಲ್' ಅವರ ಸಹಕಾರದಿಂದ ಕನ್ನಡದ ಏಳಿಗೆಗೆ ಕಂಕಣಬದ್ದರಾದರು ಬೈಲಹೊಂಗಲ ಮತ್ತು ಹಾವೇರಿ ಜಿಲ್ಲೆ ಬಂಕಾಪುರದಲ್ಲೂ ಕನ್ನಡ ಶಾಲೆಯನ್ನು ತೆರೆದರು. ನಿರಂತರ ಉತ್ಸಾಹಿಗಳಾಗಿ ಪಠ್ಯ ಹಾಗು ಪಠ್ಯೇತರ ಪುಸ್ತಕಗಳ ರಚನೆಯಲ್ಲಿ ತೊಡಗಿದರು. ಕವಿತೆಗಳನ್ನು ಕಲಿಸಲು ಶಿಕ್ಷಕರಿಗೆ ಸಹಾಯವಾಗಲು ‘ಕವಿತಾ ಪದ್ಧತಿ’ ಎನ್ನುವ ಗ್ರಂಥ ರಚಿಸಿದರು. ಪಾಂಡಿತ್ಯ ಪ್ರತಿಭೆ, ಅಧ್ಯಾಪನ, ಕೌಶಲ್ಯ, ಕಾರ್ಯಕ್ಷಮತೆ ಹಾಗೂ ಕನ್ನಡದ ಅಭಿಮಾನದಿಂದಾಗಿ ಹುನಗುಂದದ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡು ಡೆಪ್ಯೂಟಿ ಇನ್ಸ್‌ಪೆಕ್ಟರ್ ಚೆನ್ನಬಸಪ್ಪ ನವರ ವಿಶ್ವಾಸಕ್ಕೆ ಪಾತ್ರರಾಗಿ ಬೆಳಗಾವಿ ನಾರ್ಮಲ್ ಸ್ಕೂಲಿಗೆ ಸಹಾಯಕ ಅಧ್ಯಾಪಕರಾಗಿ ಬೆಳಗಾವಿ ವಿಭಾಗದ ಮರಾಠಿ ಪ್ರಭಾವದಿಂದ ಕನ್ನಡಕ್ಕೆ ಮುಕ್ತಿಯನ್ನು ಕೊಡಿಸಿದರು. ಕನ್ನಡ ಕಾವ್ಯಗಳ ಸಂಗ್ರಹ, ಪಠ್ಯಪುಸ್ತಕಗಳ ರಚನೆ ಹಾಗೂ ಪಠ್ಯೇತರ ಕೃತಿಗಳ ನಿರ್ಮಾಣಕ್ಕೂ ತೊಡಗಿದರು. ಕಿಟೆಲ್ ಅವರ ನಿಘಂಟು ಪ್ರಕಟವಾಗುವ ಮುಂಚೆ `ಶಬ್ದ ಮಂಜರಿ' ಎಂಬ 600 ಪುಟಗಳ ಶಬ್ದಕೋಶವನ್ನು ರಚಿಸಿದ್ದರು. ಶಾಸನಗಳ ಅಧ್ಯಯನ ಕಾರ್ಯದಲ್ಲಿ ತುರಮುರಿಯವರು ಬೆಳಗಾವಿಯಲ್ಲಿ ಜಾನ್‌ಫೇತ್‌ಫುಲ್ ಫೀಟ್‌ರವರಿಗೆ ಸಹಾಯಕರಾಗಿದ್ದರು. “ಕವಿತಾ ಸಂಗ್ರಹ', ಕನ್ನಡದ ಪ್ರಥಮ ಕಾವ್ಯ ಸಂಗ್ರಹ, 'ಶಬ್ದ ಮಂಜರಿ', ಷಡಕ್ಷರಿ ಕವಿಯ 'ರಾಜಶೇಖರ ವಿಳಾಸ', 'ಬಾಣ', ಅನುವಾದ, 'ಕವಿತಾ ಪದ್ದತಿ', “ಕೈವಲ್ಯ ಪದ್ಧತಿ', 'ಭಾಷಾ ದರ್ಪಣ' ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
1865ರಲ್ಲಿ 'ಮಠ ಪತ್ರಿಕೆ'ಯನ್ನು ಪ್ರಾರಂಭಿಸಿದರು. ಅದು 1926ರಲ್ಲಿ ಕನ್ನಡ ಪ್ರಾಥಮಿಕ ಶಿಕ್ಷಣವೆಂದು, 1959ರಲ್ಲಿ 'ಜೀವನ ಶಿಕ್ಷಣ'ವೆಂದು 118 ವರ್ಷ ನಡೆದ ಕನ್ನಡದ ಏಕೈಕ ನಿಯತಕಾಲಿಕೆಯಾಗಿದೆ. ಕನ್ನಡದ ಮೇಲಿನ ಅಭಿಮಾನದಿಂದ ದುಡಿದ ತುರಮರಿಯವರು ಅಕ್ಟೋಬರ್ 1877ರಂದು ತಮ್ಮ 50ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು.