ರೈತರಿಗೆ ಬೀಜ ಸ್ವರಾಜ್ಯದ ಅವಶ್ಯಕತೆಯಿದೆ ಎಂದು ಪ್ರತಿಪಾದಿಸುವ ಜಿ. ಕೃಷ್ಣಪ್ರಸಾದ್ ಅವರು ಮೈಸೂರಿನಲ್ಲಿ ’ಸಹಜ ಸಮೃದ್ಧ’ ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ. ಕೃಷಿ ಜೀವ ವೈವಿಧ್ಯ ರಕ್ಷಣಾ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು 2018-19ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ನೀಡಿ ಗೌರವಿಸಿದೆ. ಮೂಲತಃ ತುಮಕೂರು ಜಿಲ್ಲೆಯವರಾದ ಜಿ. ಕೃಷ್ಣಪ್ರಸಾದ್ ಅವರು ಆಂಧ್ರದ ಗಡಿಯಲ್ಲಿರುವ ಮಧುಗಿರಿ ತಾಲ್ಲೂಕಿನ ಇಟಕದಿಬ್ಬನಹಳ್ಳಿಯಲ್ಲಿ ಜನಿಸಿದರು. ಆಪ್ತರ ನಡುವೆ ’ಕೆಪಿ’ ಎಂದು ಕರೆಯಲಾಗುವ ಅವರು ಮಳವಳ್ಳಿ ಬಳಿ ನಾಲ್ಕೆಕರೆ ಜಮೀನು ಖರೀದಿಸಿ ವ್ಯವಸಾಯ ಮಾಡುತ್ತಿದ್ದಾರೆ.
ಬೀಜ ಸಂರಕ್ಷಣೆಯ ಮಾಹಿತಿ ಸಂಗ್ರಹ ಹಾಗೂ ಹಂಚಿಕೆಗಾಗಿ ನೆದರ್‌ಲ್ಯಾಂಡ್, ಫಿಲಿಪೈನ್ಸ್, ಕೀನ್ಯಾ, ತಾಂಜಾನಿಯಾ, ಶ್ರೀಲಂಕಾ, ಥಾಯ್‌ಲ್ಯಾಂಡ್, ಇಂಡೋನೇಸಿಯಾ, ಅಮೆರಿಕಾ ಸುತ್ತಾಡಿ ಬಂದಿದ್ದಾರೆ.
1997ರಿಂದ ಹೊಸೂರು ಬಳಿಯ ಥಳಿ ಗ್ರಾಮದಲ್ಲಿ ದೇಸಿ ಬೀಜ ವೈವಿಧ್ಯ ಕ್ಷೇತ್ರದಲ್ಲಿ ಡಾ. ವಂದನಾ ಶಿವ ಹಾಗೂ ಡಾ. ವನಜಾ ರಾಂಪ್ರಸಾದ್ ಅವರೊಂದಿಗೆ ಕೆಲಸ ಮಾಡಲು ಆರಂಭಿಸಿದದ ಅವರು 2000ರಲ್ಲಿ ಸಹಜ ಸಮೃದ್ಧ ಹುಟ್ಟು ಹಾಕಿದರು.