ಹಿರಿಯ ಚಿಂತಕ-ಲೇಖಕ-ಪ್ರವಚನಕಾರ-ಯಕ್ಷಗಾನ ಕಲಾವಿದ ದೇರಾಜೆ ಸೀತಾರಾಮಯ್ಯ ಅವರು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದವರು. ಜಮೀನುದಾರರು. ತಂದೆ ಮಂಗಲ್ಪಾಡಿ ಕೃಷ್ಣಯ್ಯ, ತಾಯಿ ಸುಬ್ಬಮ್ಮ. ಯಕ್ತಗಾನ ಕಲಾವಿದರ ಮನೆತನ. ಪ್ರಾಥಮಿಕ ಶಾಲೆಯ ಗುರು ಕೊಟ್ಟೆಕಾಯಿ ನಾರಾಯಣ ರಾಯರ ಕುಮಾರವ್ಯಾಸ ಕುರಿತ ಪಾಠದಿಂದ ಅಭಿನಯ, ಸಾಹಿತ್ಯಾಸಕ್ತಿ ಮೂಡಿತು. ಯಕ್ಷಗಾನ, ತಾಳಮದ್ದಳೆ, ನಾಟಕ, ರಂಗಭೂಮಿಯ ಬಗ್ಗೆ ಸಂಶೋಧನೆ - ವಿಮರ್ಶೆಗಳು ಹೀಗೆ ವೈವಿಧ್ಯಮಯ ಸಾಹಿತ್ಯ ರಚಿಸಿದ್ದು ಇವರ ವೈಶಿಷ್ಟ್ಯ. ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷರಾಗಿದ್ದರು. ಪುತ್ತೂರು ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷರು, ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಕೃತಿಗಳು: ಭೀಷ್ಮಾರ್ಜುನ ( ಯಕ್ಷಗಾನ ಪ್ರಸಂಗಕ್ಕೆ ಅರ್ಥ ), ಪ್ರಿಯದರ್ಶನಂ ( ಪದ್ಯಗಂಧಿ ಗದ್ಯ), ಧರ್ಮದಾಸಿ ( ನಾಟಕ ) , ಯಕ್ಷಗಾನ ವಿವೇಚನೆ ( ಪ್ರಬಂಧ), ಸುಭದ್ರಾರ್ಜುನ ( ಪ್ರಸಂಗಕ್ಕೆ ಅರ್ಥ), ಶ್ರೀರಾಮ ಚರಿತಾಮೃತಂ ( ಸಂಪೂರ್ಣ ಗದ್ಯ ರಾಮಾಯಣ ), ವಿಚಾರ ವಲ್ಲರಿ ( ವೈಚಾರಿಕ), ಧರ್ಮ ದರ್ಶನ ( ವೈಚಾರಿಕ ), ಶ್ರೀಮನ್ಮಹಾಭಾರತ ಕಥಾಮೃತಂ ( ಸಂಫೂರ್ಣ ಗದ್ಯ ಮಹಾಭಾರತ ), ರಾಮರಾಜ್ಯದ ರೂವಾರಿ ( ರಾಮಾಯಣ ಬಾಲಕಾಂಡ - ಹೊಸದೃಷ್ಟಿ), ಕುರುಕ್ಷೇತ್ರಕ್ಕೊಂದು ಆಯೋಗ ( ಮಹಾಭಾರತ ಪಾತ್ರಗಳ ಸ್ವಗತ ), ರಾಮರಾಜ್ಯ ಪೂರ್ವರಂಗ ( ರಾಮಾಯಣ ಅಯೋಧ್ಯಾ ಕಾಂಡ - ಹೊಸದೃಷ್ಟಿ ), ಸುಗ್ರೀವ ಸಖ್ಯ ( ಮಕ್ಕಳಿಗಾಗಿ ಅರ್ಥ ಪ್ರಸಂಗ ) , ಮಹಾಭಾರತ ಅಕ್ಷಯ ಪಾತ್ರೆ ( ಮಕ್ಕಳಿಗಾಗಿ ಅರ್ಥ ಪ್ರಸಂಗ ), ಕುಮಾರ ವಿಜಯ ( ಮಕ್ಕಳಿಗಾಗಿ ಅರ್ಥ ಪ್ರಸಂಗ ), ಶೂರ್ಪನಖಿಯ ಸ್ವರಾಜ್ಯ ( ಮಕ್ಕಳಿಗಾಗಿ ಅರ್ಥ ಪ್ರಸಂಗ ),
ಇವರ "ಶ್ರೀರಾಮಚರಿತಂ" ಗ್ರಂಥಕ್ಕೆ ಮೈಸೂರು ಸರ್ಕಾರದಿಂದ ಪಾರಿತೋಷಕ ಲಭಿಸಿದೆ. ದೇರಾಜೆಯವರ ಅಭಿನಂದನ ಗ್ರಂಥ "ರಸಋಷಿ" ವಿಟ್ಲದ ಸ್ವಗೃಹದಲ್ಲಿ ಅವರು 05-10-1984ರಲ್ಲಿ ನಿಧನರಾದರು.