About the Author

ಹಾಸ್ಯನಾಟಕಕಾರ ದಾಶರಥಿ ದೀಕ್ಷಿತ್ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯವರು. ತಂದೆ- ಬಾಲಾಜಿ ದೀಕ್ಷಿತ್, ತಾಯಿ- ಗಂಗೂಬಾಯಿ. ದಾಶರಥಿ ಅವರ ಪ್ರಾರಂಭಿಕ ಶಿಕ್ಷಣ ದಾವಣಗೆರೆ, ಮೊಳಕಾಲ್ಮೂರು, ಚಿತ್ರದುರ್ಗ ಸೇರಿದಂತೆ ಹಲವೆಡೆ ಪಡೆಯಬೇಕಾಯಿತು. ಆನಂತರದಲ್ಲಿ ಬೆಂಗಳೂರಿನ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಪೂರ್ಣಗೊಳಿಸಿ, ಕಾಲೇಜನ್ನು ಬಿಟ್ಟು ಬೆಂಗಳೂರಿನ ವಿಮಾನ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದರು. ಅವರು ತಮ್ಮ ಕತೆಯೊಂದನ್ನು ಪ್ರಜಾಮತ ಪತ್ರಿಕೆಯ ನಾಡಿಗೇರ್ ಕೃಷ್ಣರಾಯರಿಗೆ ನೀಡಿದ್ದರು. ಆ ಕತೆ ಪ್ರಜಾಮತ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಲೇಖಕ ತ.ರಾ. ಸುಬ್ಬರಾಯರು ಒಮ್ಮೆ ಗಂಭೀರ ಸಾಹಿತ್ಯ ರಚಿಸಲು ಜನರಿದ್ದಾರೆ ನೀನು ಲಘು ಬರಹವನು ರೂಢಿಸಿಕೋ ಎಂದು ಸಲಹೆ ನೀಡಿದ್ದರು. ಸಲಹೆಯಂತೆ ದೀಕ್ಷಿತರು ಹಾಸ್ಯ ಬರಹಗಳತ್ತ ಗಮನ ಹರಿಸಿದರು. ಬಾಲ್ಯದಿಂದಲೂ ನಾಟಕದತ್ತ ಒಲವಿದ್ದ ಅವರು ಕತಾರಚನೆಯತ್ತ ಗಮನಹರಿಸಿದರು. ಮೊದಲ ಕತೆ ಅಜ್ಜಿ ಆಸ್ತಿ ಪ್ರಯೋಗಗೊಂಡು ಪ್ರೇಕ್ಷರಕ ಮೆಚ್ಚುಗೆ ಪಡೆಯಿತು. ಆನಂತರ ‘ಅಳಿಯದೇವರು’, ‘ಲಂಬೋದರ’ ಮುಂತಾದ ನಾಟಕಗಳನ್ನು ರಚಿಸಿದರು. ಒಂದು ಕಾಲದಲ್ಲಿ ಇವರ ನಾಟಕಗಳು ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಸಂದರ್ಭದ ಮೆಚ್ಚಿನ ನಾಟಕಗಳಾಗಿದ್ದವು. ಲಘು ಬರಹಗಳನ್ನು ಬರೆಯಲು ಪ್ರಾರಂಭಿಸಿ, ಅ.ನ.ಕೃ. ಮುನ್ನುಡಿಯೊಡನೆ ಪ್ರಕಟಗೊಂಡ ಲಘುಬರೆಹಗಳ ಸಂಗ್ರಹ ‘ಪ್ರೇತ ಸಂಹಾರ’ವನ್ನು ಓದಲು ಕೊರವಂಜಿ ಹಾಸ್ಯ ಪತ್ರಿಕೆಯ ಸಂಪಾದಕರಾದ ಎಂ. ಶಿವರಾಂ (ರಾಶಿ) ಯವರಿಗೆ ನೀಡಿದರು. ಓದಿ ಮೆಚ್ಚಿದ ರಾಶಿಯವರು ಕೊರವಂಜಿ ಪತ್ರಿಕೆಗೂ ಬರೆಯಲು ಪ್ರೇರೇಪಿಸಿದರು. ಹೀಗೆ ಬರೆದ ಲಘುಲೇಖನಗಳ ಸಂಗ್ರಹ ‘ಪಕೋಡಪ್ರಿಯದಫೇದಾರ್ ದೇರಣ್ಣ’ ಪುಸ್ತಕಕ್ಕೆ ಡಿ.ವಿ.ಜಿ. ಮುನ್ನುಡಿ ಬರೆದರು.

ಇವರು ಬರೆದ ಮೊದಲ ಕಾದಂಬರಿ ‘ಬಾಳ ಬಂಧನ’. ನಂತರ ಬರೆದ ಹಾಸ್ಯ ಕಾದಂಬರಿಗಳು ಮಾವನ ಮನೆ, ‘ಗಂಡಾಗಿ ಕಾಡಿದ್ದ ಗುಂಡ’ ಮತ್ತು ‘ಮರಳಿ ಮಠಕ್ಕೆ’. ತಾವು ಕಾರ್ಯ ನಿರ್ವಹಿಸುತ್ತಿದ್ದ ವಿಮಾನ ಕಾರ್ಖಾನೆಯಿಂದ ಅನಿರೀಕ್ಷಿತವಾಗಿ ಇಂಗ್ಲೆಂಡ್‌ ಪ್ರವಾಸದ ಅವಕಾಶ ದೊರೆತಾಗ ಪ್ರವಾಸಾನುಭವದಿಂದ ಸೃಷ್ಟಿಯಾದದ್ದು ‘ಗಾಂಪರ ಗುಂಪು’ ಎಂಬ ನಗೆ ನಾಟಕ ರಚಿಸಿದರು. ಅಳಿಯದೇವರು, ಅಜ್ಜಿ ಆಸ್ತಿ, ಲಂಬೋಧರ, ಸಿಡ್ಲುಮರಿ, ಗಾಂಪರ ಗುಂಪು, ಡಾ|| ಬ್ರಹ್ಮಚಾರಿ, ತಂಬೂರಿ ತಮ್ಮಯ್ಯ, ಅಜ್ಜನ ಅವಾಂತರ ಮೊದಲಾದ ಎಂಟು ನಾಟಕಗಳು; ಮಾವನ ಮನೆ, ಮಾವನ ಮಗಳು, ಬೆಡಗಿನ ಬಲೆ, ಪಂಕಜಿ ಪರಿಣಯ, ಬಾಳಬಂಧನ, ಗಂಡಾಗಿ ಕಾಡಿದ್ದ ಗುಂಡ, ಅನುರಾಗ ಸುಧಾ, ಮದುವೆ ಉಡುಗೊರೆ, ಮರಳಿ ಮಠಕ್ಕೆ ಮುಂತಾದ ಕಾದಂಬರಿಗಳು; ಪ್ರೇತಸಂಹಾರ, ಗಾಂಪರಗಾಡಿ, ಗಂಡನ ಪೂಜನೆ, ಪಕೋಡ ಪ್ರಿಯ ದಫೆದಾರ್ ದೇರಣ್ಣ, ಇಂದ್ರಿ-ಸುಂದ್ರಿ, ಬೆದರುಬೊಂಬೆ, ಗಾಂಪಾಯಣ, ಕಾಮಣ್ಣನ ಕೋಟು, ಕನ್ನಡದ ಗಾಡಿ, ವೈದ್ಯನ ವಿವಾಹ, ಬೊಂಬೆ ಕೊಂಡಳು. ಮೊದಲಾದ 12 ನಗೆಬರಹಗಳ ಸಂಕಲನಗಳು ಪ್ರಕಟಗೊಂಡಿವೆ.

ಇವರ ಹವ್ಯಾಸದ ಮತ್ತೊಂದು ಕ್ಷೇತ್ರವೆಂದರೆ ಸೂತ್ರದ ಬೊಂಬೆಯಾಟ. ‘ಮೈಸೂರು ಪಪೆಟಿಯರ್ಸ್’ ಎಂಬ ಸಂಸ್ಥೆ ಸ್ಥಾಪಿಸಿ ಭಾರತದ ಉದ್ದಗಲಕ್ಕೂ ಸಂಚರಿಸಿ ಹಲವಾರು ಪ್ರದರ್ಶನಗಳನ್ನು ನೀಡಿದರು. ನಾಟಕ, ನಟನೆ, ಬರೆಹ ಮುಂತಾದವುಗಳ ಕ್ರಿಯಾಶೀಲತೆಯಿಂದ ಚಲನ ಚಿತ್ರರಂಗವನ್ನೂ ಪ್ರವೇಶಿಸಿ ‘ಸಂಸ್ಕಾರ’, ‘ಅಬಚೂರಿನ ಪೋಸ್ಟಾಫೀಸು’, ‘ಮುಯ್ಯೀ’, ‘ಫಣಿಯಮ್ಮ’, ‘ಭಾಗ್ಯದಲಕ್ಷ್ಮೀಬಾರಮ್ಮ’ ಮುಂತಾದ ಚಿತ್ರಗಳಲ್ಲೂ ಅಭಿನಯಿಸಿದರು. ನಗೆಬರಹಗಾರ, ಕಾದಂಬರಿಕಾರ, ನಟ, ಸೂತ್ರದ ಬೊಂಬೆಯಾಟಗಾರರಾಗಿ ಹೀಗೆ ನಾನಾ ಪ್ರಕಾರಗಳಲ್ಲಿ ಮೂಲಕ ಪ್ರೇಕ್ಷಕರನ್ನು ನಗೆಲೋಕಕ್ಕೆ ಕರೆದೊಯ್ಯುತ್ತಿದ್ದ ದೀಕ್ಷಿತರು ಹಾಸ್ಯಲೋಕದಿಂದ ಮರೆಯಾದದ್ದು’ 1984ರ ಆಗಸ್ಟ್ 28ರಂದು.

ದಾಶರಥಿ ದೀಕ್ಷಿತ್

(18 Jan 1921-28 Aug 1984)