About the Author

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಸಿ. ಕೆ. ನಾಗರಾಜರಾವ್ ಅವರು 1915ರ ಜೂನ್ 12ರಂದು ಜನಿಸಿದರು. ತಂದೆ ಕೃಷ್ಣಮೂರ್ತಿ ರಾವ್ ಮತ್ತು ತಾಯಿ ಪುಟ್ಟಮ್ಮ..ತಂದೆ ವಿವಿಧೆಡೆ ವರ್ಗವಾಗುತ್ತಿರುವ ಪ್ರಯುಕ್ತ ಇವರ ಪ್ರಾಥಮಿಕ ಶಿಕ್ಷಣವು ವಿವಿಧಡೆಯಾಯಿತು. ಎಸ್.ಎಸ್.ಎಲ್.ಸಿ ಉತ್ತೀರ್ಣವಾಗಿದ್ದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ. 

ಇಂಟರ್ಮೀಡಿಯೆಟ್‌ನಲ್ಲಿ ಉತ್ತೀರ್ಣರಾದರೂ ಓದು ಮುಂದುವರಿಯದೇ  ಮೈಸೂರು ಪ್ರೀಮಿಯರ್ ಮೆಟಲ್‌ ಕಾರ್ಖಾನೆಯಲ್ಲಿ. ಸಿಬ್ಬಂದಿ ನಿಯಂತ್ರಣ ವಿಭಾಗದಲ್ಲಿ ಉದ್ಯೋಗಕ್ಕೆ ಸೇರಿದರು.ನಂತರ ಅದನ್ನು ತೊರೆದು, ನಿಟ್ಟೂರು ಶ್ರೀನಿವಾಸರಾಯರು ನಡೆಸುತ್ತಿದ್ದ ಸತ್ಯಶೋಧನ ಪ್ರಕಟಣಾ ಮಂದಿರದಲ್ಲಿ ವ್ಯವಸ್ಥಾಪಕರಾದರು. ಇಂಡಿಯನ್‌ ಮ್ಯೂಚುಯಲ್‌ ಲೈಫ್‌ ಅಸೋಸಿಯೇಷನ್‌ ಸಂಸ್ಥೆಗೂ ಸೇರಿದರು. ನಂತರ ಪತ್ರಿಕೋದ್ಯಮ ಸೇರಿದರು. ಕನ್ನಡ ಮತ್ತು ಇಂಗ್ಲಿಷ್‌ ಪತ್ರಿಕೆಗಳಿಗೆ ಲೇಖನ ಮತ್ತು ವಿಮರ್ಶೆಗಳನ್ನು ಬರೆದರು. ಕ್ವಾರ್ಟರ್ಲಿ ಜನರಲ್‌ ಆಫ್‌ ಮಿಥಿಕ್‌ ಸೊಸೈಟಿ ಪತ್ರಿಕೆಗೆ ಲೇಖನಗಳನ್ನೂ ಬರೆದು, ಅದರ ಸಂಪಾದಕರಾದರು. 

ನಾಗರಾಜರಾವ್, ತಮ್ಮ 17ರ ಹರೆಯದಲ್ಲಿ ಕೈಲಾಸಂ aವರ ‘ಹೋಂ ರೂಲು’ ನಾಟಕದಲ್ಲಿ ವಿಧವೆ ಸುಬ್ಬಮ್ಮನ ಪಾತ್ರವಹಿಸಿ ಶ್ರೇಷ್ಠನಟ ಪ್ರಶಸ್ತಿ ಪಡೆದಿದ್ದರು. ಬಾಲ್ಯದಿಂದಲೂ ನಾಟಕದ ಹುಚ್ಚಿತ್ತು. 1976ರಲ್ಲಿ ‘ದಿ ಯುನೈಟೆಡ್‌ ಆರ್ಟಿಸ್ಟ್ಸ್‌’ ಎಂಬ ಸಂಸ್ಥೆ. ಕಟ್ಟಿದರು. ‘ಹೋಂ ರೂಲು, ಆಷಾಢಭೂತಿ, ರಾಜಿಕಬೂಲಿ, ಜಯಶ್ರೀ, ವಾಲ್ಮಿಕಿಯ ಭಾಗ್ಯ, ಗದಾಯುದ್ಧ, ಶಾಮಣ್ಣನ ಸಾಹಸ, ಮುಂತಾದ ನಾಟಕಗಳಲ್ಲಿ ತಾವೂ ಅಭಿನಯಿಸಿ ಕಲಾವಿದರನ್ನು ಬೆಳಕಿಗೆ ತಂದು, ಹೊರನಾಡಿನಲ್ಲೂ ಪ್ರದರ್ಶಿಸಿದರು. 

ಕನ್ನಡ, ಸಂಸ್ಕೃತ, ತೆಲುಗು, ಇಂಗ್ಲಿಷ್‌, ಹಿಂದಿ ಭಾಷೆಗಳಲ್ಲಿಯೂ ನಟಿಸಿದರು. ರಂಗಭೂಮಿಗೆ ಸುಮಾರು 40 ವರ್ಷ ದುಡಿದರು. ತಾವು ಬರೆದ ಶೂದ್ರಮುನಿ, ಸಂಪನ್ನ ಸಮಾಜ ಮತ್ತು ಸಂಕೋಲೆ ಬಸವ ಎಂಬ ಮೂರು ನಾಟಕಗಳನ್ನು ಪ್ರಕಟಿಸಿದರು. ಹಿಂದಿಯಲ್ಲಿ ‘ಏಕಲವ್ಯ’ ನಾಟಕ ಬರೆದರು ‘ದ್ರೌಪದಿಯ ಮಾನಸಂರಕ್ಷಣಮು’ ಎಂಬ ಚಲನಚಿತ್ರದ ಸಹಾಯಕ ನಿರ್ದೇಶಕರಾಗಿ, ‘ಸಂತಕಾನ್ಹೋಪಾತ್ರ’ ಚಿತ್ರಕ್ಕೆ ಚಿತ್ರಕಥೆ ಮತ್ತು ಗೌರಿ, ಅಪರೂಪದ ಅತಿಥಿಗಳು ಚಿತ್ರಗಳಿಗೆ ಸಂಭಾಷಣೆ ಬರೆದರು. ‘ದೈವಲೀಲೆ’ ಚಿತ್ರವನ್ನು ಆರ್.ವಿ. ಅರಸುಕುಮಾರರೊಡನೆ ನಿರ್ಮಿಸಿ, ಸಿ.ಎನ್‌. ಕೃಷ್ಣಮಾಚಾರ್ ನಿರ್ದೇಶಿಸಿದ್ದರು.

ಕೃತಿಗಳು: ಕಾಡುಮಲ್ಲಿಗೆ, ಸಂಗಮ, ದೃಷ್ಟಿಮಥನ, ಸಾವಿಲ್ಲದವರು ಮುಂತಾದ ಸಂಕಲನಗಳು ಪ್ರಕಟಗೊಂಡವು. ಹಿಂದಿ ಭಾಷೆಯಿಂದ ಶರಶ್ಚಂದ್ರರ ಪ್ರೇಮಯೋಗಿನಿ, ದರ್ಪಚೂರ್ಣ, ಅರಕ್ಷಣೀಯ, ಕಾಶಿನಾಥ, ವಿಶ್ವೇಶ್ವರಿ ಮತ್ತು ಮಂತ್ರ ದೀಕ್ಷೆ ಎಂಬ ಆರು ಕಾದಂಬರಿಗಳನ್ನು ಅನುವಾದಿಸಿದರು. ‘ಮಹಾಕವಿ ಲಕ್ಷ್ಮೀಶನ ಸ್ಥಳ ಮತ್ತು ಕಾಲ’ ಕುರಿತು ಸಂಶೋಧನೆ ಗ್ರಂಥ ಬರೆದಿದ್ದಾರೆ. ಪಟ್ಟಮಹಾದೇವಿ ಶಾಂತಲಾದೇವಿ.-ಇವರ ಕಾದಂಬರಿ. ಭಕ್ತಿವಿಜಯದ ಸಣ್ಣಕತೆಯನ್ನಾಧರಿಸಿದ ‘ನಂಬಿದಜೀವ’ ಮತ್ತು ಮಣಿಪುರದ ಇತಿಹಾಸದ ‘ಕುರಂಗ ನಯನಿ’. ಶಾಂತಲ ಕಾದಂಬರಿಯ ಮುಂದುವರೆದ ಭಾಗವಾದ ‘ವೀರಗಂಗ ವಿಷ್ಣುವರ್ಧನ’ ಮತ್ತು ಹೊಯ್ಸಳ ಸಾಮ್ರಾಜ್ಯದ ಸಂಪೂರ್ಣ ಕತೆ ಯನ್ನೂ ಕಟ್ಟಿ ಕೊಡುವ ‘ದಾಯಾದ ದಾವಾನಲ’. ‘ಕುರಂಗನಯನಿ’, ‘ಶ್ರೀಪೃಥ್ವೀವಲ್ಲಭ’ ಕಾದಂಬರಿಗಳು. ‘ನನ್ನ ನೆಚ್ಚಿನ ನಾಡೆ’, ‘ತಾತಮಾವನ ಕನಸು’, ‘ಕಾಂಬೋಡಿಯಾ – ಲಾವೋಸ್’, ‘ನಾಯಿಕೊಡೆ’, ‘ಏಕಲವ್ಯ ದರ್ಶನ’ ಇತರೆ ಕೃತಿಗಳು.

ನಾಗರಾಜರಾಯರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ, ಕೋಶಾಧಿಕಾರಿಯಾಗಿ, ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷರಾಗಿ, ಮಿಥಿಕ್‌ ಸೊಸೈಟಿಯ ಕಾರ್ಯದರ್ಶಿ, ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನ ಸ್ಥಾಪಕ ಸಹಾಯಕ ಪ್ರಾಚಾರ್ಯರಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿದ್ದರು.

ಪ್ರಶಸ್ತಿ-ಗೌರವಗಳು: ಮಹಾಕವಿ ಲಕ್ಷ್ಮೀಶನ ಸ್ಥಳ ಮತ್ತು ಕಾಲಕೃತಿಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಟ್ಟಮಹಾದೇವಿ ಶಾಂತಲಾದೇವಿ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯ ಶ್ರೇಷ್ಠ ಸೃಜನಶೀಲ ಕೃತಿ ಪ್ರಶಸ್ತಿ ಮತ್ತು ಭಾರತೀಯ ಜ್ಞಾನಪೀಠ ಪ್ರತಿಷ್ಠಾನದ ‘ಮೂರ್ತಿದೇವಿ’ ಸಾಹಿತ್ಯ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗಳು ಸಂದಿವೆ. ಅವರು 1998ರ ಏಪ್ರಿಲ್ 10  ರಂದು ನಿಧನರಾದರು.

ಸಿ.ಕೆ. ನಾಗರಾಜರಾವ್

(12 Jun 1915-10 Apr 1998)