ಬೋಳಂತಕೋಡಿ ಎನ್ನುವುದು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ಒಂದು ಪುಟ್ಟ ಪ್ರದೇಶಕ್ಕೆ ಇರುವ ಹೆಸರು. ಆ ಹೆಸರು ಕನ್ನಡದ ಅಕ್ಷರಗಳು ಇರುವಷ್ಟೂ ದಿನ ಇರಬೇಕೆನ್ನುವ ಹಾಗೆ ಪುಸ್ತಕ ಪ್ರೀತಿಯಲ್ಲಿ ಅದನ್ನು ಶಾಶ್ವತಗೊಳಿಸಿದವರು, ಅಲ್ಲಿ ಹುಟ್ಟಿ ಬೆಳೆದ ಈಶ್ವರ ಭಟ್ಟರು. ವಿಶ್ವವಿದ್ಯಾನಿಲಯಗಳು ಪ್ರಕಟನೆಗೆ ಉತ್ಸಾಹ ತೋರಿಸಬೇಕಿದ್ದ "ಉಗ್ರಾಣ ಸಾಹಿತ್ಯ", ಎಂ.ಎನ್. ಕಾಮತ್ ಸಾಹಿತ್ಯ'ದಂಥ ಬೃಹತ್ ಸಾಹಿತ್ಯ ಸಂಪುಟಗಳ ಜೊತೆ ನೂರಾರು ಮೌಲಿಕ ಸಾಹಿತ್ಯ ಕೃತಿಗಳ ಪ್ರಕಟಣೋತ್ಸವವನ್ನೇ ಕೈಕೊಂಡ ಅಪರೂಪದ ಸಾರ್ಥಕ ಬದುಕು ಅವರದು.
ಅಣ್ಣಂದಿರಾದ ಬಿ.ಎಂ. ಶರ್ಮ, ಬಿ. ಶಂಕರ ಭಟ್ಟರು, ಇವರು ಚಿಕ್ಕವರಿದ್ದಾಗಲೇ ಕನ್ನಡ ಪ್ರಪಂಚ ಪ್ರಕಾಶ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ನೂರಕ್ಕಿಂತಲೂ ಹೆಚ್ಚು ಕೃತಿ ಪ್ರಕಟಿಸಿ ಕೈಸೋತು ಸುಮ್ಮನಾಗಿದ್ದರು. ನಿಂತು ಹೋಗಿದ್ದ ಆ ಸಂಸ್ಥೆಗೆ ಭಟ್ಟರು ಪುನರ್ಜನ್ಮ ನೀಡಿದರು. ಪ್ರಗತಿಪರ ಚಿಂತಕರಾಗಿದ್ದ ಅವರಯ ಡಾ. ಶಿವರಾಮ ಕಾರಂತ ಮತ್ತು ಕಾದಂಬರಿಕಾರ ನಿರಂಜನರ ಅಭಿಮಾನಿ. ಪುತ್ತೂರು ಕರ್ನಾಟಕ ಸಂಘವನ್ನು ಮತ್ತೆ ಎದ್ದು ನಿಲ್ಲಿಸಿದ ಕೀರ್ತಿಗೆ ಶಿಖರವಿಟ್ಟ ಹಾಗೆ ಅವರಿಂದ ರೂಪುಗೊಂಕ "ಶಿವರಾಮ ಕಾರಂತ ಅಧ್ಯಯನ ಕೇಂದ್ರ" ಮತ್ತು "ನಿರಂಜನ ಸಾಹಿತ್ಯ ಪ್ರಶಸ್ತಿ" ಅವರ ಕನಸಿನ ಕೂಸುಗಳು.