ಬೆಸಗರಹಳ್ಳಿ ರಾಮಣ್ಣ ಅವರು ಮಂಡ್ಯ ಜಿಲ್ಲೆಯ ಬೆಸಗರಹಳ್ಳಿಯಲ್ಲಿ ಜನಿಸಿದರು. ಇವರ ತಾಯಿ ದೊಡ್ಡತಾಯಮ್ಮ, ತಂದೆ ಚಿಕ್ಕಎಲ್ಲೇಗೌಡ. ತಮ್ಮಲ್ಲಿದ್ದ ಪ್ರತಿಭೆ, ಶಕ್ತಿ, ಚೈತನ್ಯಗಳನ್ನು ಗ್ರಾಮೀಣ ಸಮುದಾಯದ ನೋವು, ನಲಿವು , ಶೋಷಣೆಗೆ, ಅಜ್ಞಾನಕ್ಕೆ ಸ್ಪಂದಿಸಲು ಮೀಸಲಿಟ್ಟವರು ರಾಮಣ್ಣ. ಒಂದೆಡೆ ಸಮುದಾಯದ ದೇಹರೋಗ್ಯ, ಸ್ವಾಸ್ಥ್ಯದ ಕಡೆಗೆ ಗಮನಹರಿಸಿದರೆ ಮತ್ತೊಂದೆಡೆ ಪ್ರವೃತ್ತಿಯಿಂದ ಲೇಖಕರಾಗಿ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಕಡೆಗೂ ಗಮನ ಹರಿಸಿದರು. ಪ್ರಾರಂಭಿಕ ಶಿಕ್ಷಣ ಬೆಸಗರಹಳ್ಳಿ ಮತ್ತು ಮದ್ದೂರಿನಲ್ಲಿ. ಇಂಟರ್ಮೀಡಿಯೇಟ್ ನಂತರ ಎಂ.ಬಿ.ಬಿ.ಎಸ್. ಪದವಿ ಪಡೆದದ್ದು ಮೈಸೂರಿನಲ್ಲಿ. ನಂತರ ಅರಿವಳಿಕೆ ಶಾಸ್ತ್ರದಲ್ಲಿ ಪಡೆದ ಡಿಪ್ಲೊಮಾ. ಅಮೆರಿಕ ಮುಂತಾದ ವಿದೇಶಗಳಿಂದ ಉದ್ಯೋಗಕ್ಕೆ ಆಹ್ವಾನ ಬಂದರೂ ಆಯ್ದುಕೊಂಡದ್ದು ಹಳ್ಳಿಯ ವೈದ್ಯಕೀಯ ಸೇವೆಯ ಬದುಕು. ಗ್ರಾಮೀಣ ಪ್ರದೇಶದಲ್ಲಿ ಸುಮಾರು 20 ವರ್ಷಗಳ ಕಾಲ ವೈದ್ಯರಾಗಿ ಕಾರ್ಯನಿರತರಾಗಿದ್ದರು. ಸರಕಾರಿ ವೈದ್ಯರಾಗಿ ನೇಮಕಗೊಂಡು ಕೊಡಿಯಾಲ, ಬೆಳ್ಳೂರು, ಮೇಲುಕೋಟೆ, ಶ್ರೀರಂಗಪಟ್ಟಣ, ಹಳೇಬೀಡು ಮುಂತಾದ ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆಸಲ್ಲಿಸಿ 1996 ರಲ್ಲಿ ನಿವೃತ್ತಿ ಪಡೆದರು. ವಿಶ್ವದ ವಿವಿಧ ಭಾಗಗಳಿಂದ ಬಂದಿದ್ದ ವೈದ್ಯರೊಂದಿಗೆ ತಮ್ಮ ಕಾಯಕವನ್ನೂ ಹಂಚಿಕೊಂಡು ಬಿಹಾರದ ಬಾಗಲ್ಪುರದಲ್ಲಿ (1974) ನಡೆದ ಸಿಡುಬು ನಿರ್ಮೂಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಳ್ಳಿಯ ಬದುಕಿನೊಂದಿಗೆ ಮಿಳಿತವಾಗಿರುವ ಜಾನಪದ ಸಂಸ್ಕೃತಿಯ ಅಂಗವಾದ ಕಥೆ, ಲಾವಣಿ, ಪದಗಳು ರಾಮಣ್ಣನವರನ್ನೂ ಆಕರ್ಷಿಸಿತು.
ಯುವರಾಜ ಕಾಲೇಜಿನಲ್ಲಿದ್ದಾಗ ಜಿ.ಎಸ್. ಶಿವರುದ್ರಪ್ಪನವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ವಸಂತ’ ಪತ್ರಿಕೆಗೆ ಬರೆದ ಮೊದಲ ಕತೆ ‘ಹಸಿವಿನ ಕಹಳೆ’ ದುರದೃಷ್ಟವಶಾತ್ ಪತ್ರಿಕೆ ಪ್ರಕಟವಾಗದಿದ್ದರೂ ಜಿ.ಎಸ್.ಎಸ್. ರವರು ಪ್ರೋತ್ಸಾಹದ ನುಡಿ ಬರೆದು ಹಸ್ತಪ್ರತಿಯನ್ನು ಹಿಂದಿರುಗಿಸಿದರು. ನಿರಾಶರಾಗದ ರಾಮಣ್ಣನವರು ಪ್ರಜಾವಾಣಿ ದೀಪಾವಳಿ ಸಂಚಿಕೆಗೆ (1962) ಬರೆದ ಕತೆ ‘ಹಾವಿಲ್ಲದ ಹುತ್ತ’. ತೀರ್ಪುಗಾರರ ಮೆಚ್ಚುಗೆ ಗಳಿಸಿದರೆ ಇದೇ ಪತ್ರಿಕೆಯ ದೀಪಾವಳಿ ಸಂಚಿಕೆಯಲ್ಲಿ ‘ಸುಗ್ಗಿ’ ಕತೆ ಮೊದಲ ಬಹುಮಾನಗಳಿಸಿ ಕತೆಗಾರರೆನ್ನಿಸಿಕೊಂಡರು. ಬಸವಣ್ಣ, ಗಾಂಧಿ, ಪೆರಿಯಾರ್, ಕುವೆಂಪು ಮುಂತಾದವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸುತ್ತಲಿನ ಅಸಮಾನತೆಯ ವಿರುದ್ಧ, ಅನ್ಯಾಯದ ವಿರುದ್ಧ ಹೋರಾಡುತ್ತ, ಸಮಾಜವಾದಿ ಯುವಜನ ಸಭಾ, ಬಂಡಾಯ ಸಾಹಿತ್ಯ ಸಂಘಟನೆ, ದಲಿತ ಸಂಘರ್ಷ ಸಮಿತಿ ಮುಂತಾದ ಅನೇಕ ಪ್ರಗತಿಪರ ಸಂಘಟನೆಗಳೊಡನೆ ಗುರುತಿಸಿಕೊಂಡಿದ್ದರು. ಹಳ್ಳಿಗಾಡಿನ ವೈದ್ಯರಾಗಿ ತಾವು ಕಂಡದ್ದನ್ನೂ ಕಂಡಂತೆ ವಾಸ್ತವ ನೆಲೆಗಟ್ಟಿನ ಮೇಲೆ ಮಾನವೀಯ ಸಂಬಂಧಗಳ ಶೋಧಕರಾಗಿ, ಗ್ರಾಮಾಂತರ ಬದುಕಿನ ನೋವು ನಲಿವುಗಳನ್ನು, ಊಳಿಗಮಾನ್ಯ ಪದ್ಧತಿಯನ್ನು ವಿರೋಧಿಸುವಂತಹ ವಿಭಿನ್ನ ನೆಲೆಗಳಲ್ಲಿ ಹಲವಾರು ಕತೆಗಳನ್ನು ರಚಿಸಿದರು.
ಹೀಗೆ ಪ್ರಕಟಗೊಂಡ ಇವರ ಕಥೆಗಳು ‘ನೆಲದ ಒಡಲು’, ‘ಗರ್ಜನೆ’, ‘ಹರಕೆಯ ಹಣ’, ‘ಒಂದು ಹುಡುಗನಿಗೆ ಬಿದ್ದ ಕನಸು’, ‘ನೆಲದ ಸಿರಿ’ ಎಂಬ ಕಥಾಸಂಕಲನಗಳು. ‘ಕನ್ನಂಬಾಡಿ’ ಎಂಬ ಸಮಗ್ರ ಕಥಾಸಂಕಲನವಲ್ಲದೆ ನಂತರ ಬರೆದ 18 ಕಥೆಗಳ ಸಂಕಲನ ‘ಕೊಳಲು ಮತ್ತು ಖಡ್ಗ’ ಕಥಾಸಂಕಲನಗಳವೂ ಪ್ರಕಟವಾಗಿವೆ. ‘ರಕ್ತಕಣ್ಣೀರು’ ಮತ್ತು ‘ತೋಳಗಳ ನಡುವೆ’ ಇವರು ಬರೆದ ಎರಡು ಕಾದಂಬರಿಗಳಾದರೆ ‘ಶೋಕಚಕ್ರ’ ಕವನ ಸಂಕಲನ. ಕಲ್ಲೇಶಿವೋತ್ತಮರಾವ್‌ರವರು ಜನ ಪ್ರಗತಿಯ ಸಂಪಾದಕರಾಗಿದ್ದ ಸಂದರ್ಭದಲ್ಲಿ ‘ರಕ್ತಕಣ್ಣೀರು’ ಕಾದಂಬರಿಯನ್ನೂ ಧಾರಾವಾಹಿಯಾಗಿ ಪ್ರಕಟಿಸಿದರು. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿದಷ್ಟೇ ಅಲ್ಲದೆ ಕೇಂದ್ರ ಸಾಹಿತ್ಯ ಅಕಾಡಮಿಯ ಕನ್ನಡ ವಿಭಾಗದ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಇವರು ಬರೆದ ‘ಜಾಡಮಾಲಿ’ ಮತ್ತು ‘ನೂರುರೂಪಾಯಿ ನೋಟು’ ಕಥೆಗಳು ಜ್ಞಾನಪೀಠ ಪ್ರಶಸ್ತಿ ಸಮಿತಿಯ ಆಯ್ಕೆಮಾಡಿ ಪ್ರಕಟಿಸುವ ‘ಭಾರತೀಯ ಕಹಾನಿಯಾ’ ಸಂಕಲನದಲ್ಲಿ ಸ್ಥಾನ ಪಡೆದಿವೆ. ರಾಮಣ್ಣನವರ ಆಯ್ದ ಕಥಾಸಂಕಲನವನ್ನೂ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿಯೂ ಆಯ್ಕೆಮಾಡಲಾಗಿತ್ತು. 1968 ಮತ್ತು72 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಕಥಾ ಸಾಹಿತ್ಯ ವಿಭಾಗದ ಬಹುಮಾನಗಳು, ‘ಒಂದು ಹುಡುಗನಿಗೆ ಬಿದ್ದ ಕನಸು’ ಕಥಾ ಸಂಕಲನಕ್ಕೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿಯಲ್ಲದೆ 1990 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿಯು ದೊರೆತಿದೆ. ಮಂಡ್ಯದಲ್ಲಿ ನಡೆದ ವಿಚಾರ ಸಂಕೀರ್ಣದ ಸಂದರ್ಭದಲ್ಲಿ ರಾಮಣ್ಣನವರ ಸಾಹಿತ್ಯದ ಬಗ್ಗೆ ವಿಸ್ತೃತ ಚರ್ಚೆ ನಡೆದು ಅಂದು ಮಂಡಿಸಿದ ಪ್ರಬಂಧಗಳ ಸಂಕಲನ ‘ಆಲೆಮನೆ’ ಹಾಗೂ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ‘ಕಾಡುಗಿಣಿ’ (2009) ‘ಅಭಿನಂದನ ಗ್ರಂಥವು ಪ್ರಕಟವಾಗಿವೆ.