ಲೇಖಕ ಬಸವರಾಜು ಮೈಸೂರಿನ ಕುಕ್ಕರಹಳ್ಳಿ ಗ್ರಾಮದವರು. ತಂದೆ- ಧನಗಳ್ಳಿ ಸಿದ್ಧಯ್ಯ, ತಾಯಿ- ನಿಂಗಮ್ಮ. ಎಂ.ಲಿಬ್.ಸೈನ್ಸ್ ನಲ್ಲಿ ಪದವಿ ಪಡೆದಿರುವ ಬಸವರಾಜು ಅವರು ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ವರ್ಷಗಳು ಡಿಪ್ಲೊಮಾ ಗ್ರಂಥಾಲಯ ವಿಜ್ಞಾನ ಬೋಧನೆ, ಗ್ರಂಥಪಾಲಕ, ಮರಿಮಲ್ಲಪ್ಪನವರ ಪದವಿ ಪೂರ್ವ ಕಾಲೇಜಿನಲ್ಲು ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಪ್ರವೃತ್ತಿಯಲ್ಲಿ ಕಥೆಗಾರರಾಗಿರುವ ಅವರು ಸಾಹಿತ್ಯದಲ್ಲಿಯೂ ತಮ್ಮನ್ನು ತೋಡಗಿಸಿಕೊಂಡಿದ್ದಾರೆ. ಕೆಲವು ಕಾಲ ರಂಗಕರ್ಮಿಯಾಗಿ ಬಿ.ವಿ.ಕಾರಂತರ ನಿರ್ದೇಶನದ ಹಯವದನ ನಾಟಕದ ಜೊತೆಗೆ, ಹಲವು ನಿರ್ದೇಶಕರ ನಾಟಕಗಳು ಹಾಗೂ ಸಾಕ್ಷರತೆಯ ಬೀದಿ ನಾಟಕಗಳಲ್ಲಿ ನಟಿಸಿದ್ದಾರೆ. ಪದವಿ ಓದುತ್ತಿದ್ದಾಗಲೇ ‘ಸ್ಟೂಡೆಂಟ್ ಫಾರ್ ಡೆಮಾಕ್ರಸಿ’ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಯಾಗಿ ದುಡಿದಿದ್ದಾರೆ. ಅಲ್ಲದೇ ಮೈಸೂರಿನ ಮಂಟೇಸ್ವಾಮಿ ಪ್ರತಿಷ್ಠಾನದ ಸದಸ್ಯರಾಗಿದ್ದಾರೆ. ಜೊತೆಗೆ ‘ಸಂಕುಲ’ ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿಯಾಗಿ, ರಂಗಾಯಣ ಹಾಗೂ ಮಂಟೇಸ್ವಾಮಿ ಪ್ರತಿಷ್ಠಾನ ಅವರೊಡಗೂಡಿ ಮಂಟೇಸ್ವಾಮಿ ಜಾನಪದಮೇಳ, ರಂಗಾಯಣದೊಟ್ಟಿಗೆ ವಿಮರ್ಶೆಯ ವಿಮರ್ಶೆ, ಮೈಸೂರಿನ ಜಿಲ್ಲಾಡಳಿತದೊಂದಿಗೆ ಜಿಲ್ಲಾ ಪಂಚಾಯಿತಿಯ ಆವರಣದಲ್ಲಿ ‘50ರ ಮಧ್ಯರಾತ್ರಿ’ ಸ್ವಾತಂತ್ರ್ಯದ ಆಚರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ.
ನಿಸರ್ಗ ಟ್ರಸ್ಟ್(ರಿ) ನೈಸರ್ಗಿಕ ಆಹಾರೋತ್ಪನ್ನ ಕೇಂದ್ರದ ಅಧ್ಯಕ್ಷನಾಗಿ, ಸಾವಯವ ರೈತರ ಮಾರುಕಟ್ಟೆಗೆ ರೈತರ ಸಂತೆಯ ಆಯೋಜನೆ, ಸಾವಯವ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ ಕೇಂದ್ರಗಳ ತೆರೆಯುವಿಕೆ, ಹೊನ್ನೂರಿನಲ್ಲಿ ನಿಸರ್ಗ ಟ್ರಸ್ಟ್ ವತಿಯಿಂದ ಸಾವಯವ ರೈತರಿಗಾಗಿ ಸಾಮೂಹಿಕ ಹೈನುಗಾರಿಕೆ ಬೇಸಾಯ ಮುಂತಾದ ಕಾರ್ಯಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಸಾಹಿತ್ಯ ರಚನೆಯ ಜೊತೆಗೆ ಈ ಎಲ್ಲಾ ಚಟುವಟಿಕೆಗಳಲ್ಲಿ ಬೆರೆಯುತ್ತಾ, ರಾಜ್ಯ ಸಂಪನ್ಮೂಲ ಕೇಂದ್ರ ಮೈಸೂರು ಇವರು ಆಯೋಜಿಸುತ್ತಿದ್ದ ಸಾಕ್ಷರತಾ ಚಳುವಳಿಗಳಲ್ಲಿ ಹಾಗೂ ಸಾಹಿತ್ಯ ರಚನಾ ಶಿಬಿರದಲ್ಲಿ ಪಾಲ್ಗೊಂಡಿರುವ ಅವರು ‘ನೀನೇ ಕಾರಣ’, ‘ಸಾಕಮ್ಮನ ಕಥೆ’, ‘ಸಮಾನತೆ’, ‘ಹುಲಿ ಮತ್ತು ಕತ್ತೆ’ ಸೇರಿದಂತೆ ಹಲವು ಕಥಾ ಪುಸ್ತಕಗಳನ್ನು ರಚಿಸಿದ್ದಾರೆ. ಮಾನವ ನಿರ್ಮಿತ ಅದ್ಭುತಗಳು ನವಸಾಕ್ಷರಿಗಾಗಿ ಮಾಹಿತಿ ಪುಸ್ತಕ, ‘ರಾಗ ಸಂಗಮ’ ವಿವಿಧ ಲೇಖಕರುಗಳ ನಾಟಕ ಸಂಗ್ರಹಿಸಿದ್ದಾರೆ. ‘ಸೂರಿಲ್ಲದ ರಂಗದಲಿ’(ಮೂರು ಸಂಪುಟ) ವಿವಿಧ ಲೇಖಕರುಗಳ ನಾಟಕ ಸಂಗ್ರಹ ಸೇರಿದಂತೆ ಹಲವು ವೃತ್ತಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ‘ಮೊಕಾರ’ ಸಂಕಲನದ ನೀರು ಕಥೆ ತಾಂತ್ರಿಕ ವಿಶ್ವವಿದ್ಯಾಲಯದ ಇಂಜನಿಯರಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯ ಕನ್ನಡ ಮನಸ್ಸು ಕೃತಿಯಲ್ಲಿ ಹಾಗೂ ಶಿವಮೊಗ್ಗ ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯವಾಗಿದೆ. ‘ಬಾಳಾಟ’ ಕಥಾಸಂಕನದಲ್ಲಿರುವ ಮುನ್ನುಡಿಯಲ್ಲಿನ ಅವ್ವ ಪದ್ಯ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನದಲ್ಲಿ ಪ್ರಕಟಗೊಂಡಿರುವ ನಾನೇಕೆ ಬರೆಯುತ್ತೇನೆ ಎನ್ನುವ ಲೇಖನ ಈ ಎರಡೂ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ ಇಲ್ಲಿ ಕನ್ನಡ ಎಂ.ಎ. ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ.
ಮೈಸೂರಿನ ರಂಗಾಯಣದ ಕಲಾವಿದ ಮಾಯಸಂದ್ರ ಕೃಷ್ಣಪ್ರಸಾದ್ ಇವರು ಪುನುಗ ಕಥಾಸಂಕಲನದ ಕಳೆದು ಹೋದವರು ಕತೆಯನ್ನು ರಂಗರೂಪಕ್ಕಿಳಿಸಿ, ಆ ನಾಟಕವನ್ನು ರಂಗಭೂಮಿ ವಿದ್ಯಾರ್ಥಿಗಳಿಗೆ ನಿರ್ದೇಶಿಸಿ ಪ್ರದರ್ಶನ ಕಂಡಿದೆ. ಜೊತೆಗೆ ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಪ್ರಾಧ್ಯಾಪಕರಾದ ಡಾ. ನೀಲಗಿರಿ ತಳವಾರ್ ಹಾಗೂ ಡಾ. ಎನ್. ಯೋಗೇಶ್ ಇವರ ಸಂಪಾದಕತ್ವದಲ್ಲಿ ತಮ್ಮ ಬಳಗದ ವತಿಯಿಂದ ಈವರೆಗಿನ ಕಥೆಗಳನ್ನು ಕುರಿತು ವಿವಿಧ ತಲೆಮಾರುಗಳ ಬರಹಗಾರರಿಂದ ಲೇಖನಗಳನ್ನು ಸಂಗ್ರಹಿಸಿ ಬಸವರಾಜು ಕುಕ್ಕರಹಳ್ಳಿ ಕಥಾಲೋಕ ಎನ್ನುವ ಶೀರ್ಷಿಕೆಯಡಿ ಪ್ರಕಟಿಸಿದರು. 2019ರಲ್ಲಿ ಕಾಲನೊದ್ದವರು ನೀಳ್ಗತೆ ಪ್ರಕಟವಾಗಿದ್ದು, 2020 ರಲ್ಲಿ ಅವರ ‘ಅವ್ವ ಬರಲೇ ಇಲ್ಲ’ ಕವನ ಸಂಗ್ರಹ ಪ್ರಕಟವಾಗಿದೆ.