ಪಂಡಿತರು, ಭಾಷಾಂತರಕಾರರು, ಅಭಿನವ ಕಾಳಿದಾಸ ಎಂದೇ ಖ್ಯಾತಿಯ ಬಸವಪ್ಪ ಶಾಸ್ತ್ರಿ 1843 ಮೇ 02 ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ನಾರಸಂದ್ರ ಗ್ರಾಮದಲ್ಲಿ ಜನಿಸಿದರು. ತಮ್ಮ 18ನೇ ವಯಸ್ಸಿನಲ್ಲಿ ' ಕೃಷ್ಣರಾಜಾಭ್ಯುದಯ' ಎಂಬ ಕಾವ್ಯವನ್ನು ರಚಿಸಿ ಪ್ರಖ್ಯಾತರಾದರು. ಸಂಗೀತದಲ್ಲೂ ಉತ್ತಮ ಜ್ಞಾನ ಗಳಿಸಿಕೊಂಡ ಅವರು ಕಾಳಿದಾಸನ ಪ್ರತಿಭೆಗೆ ಕುಂದಿಲ್ಲದಂತೆ ಸಂಸ್ಕೃತ ಮೂಲದ ಕಾಳಿದಾಸನ ನಾಟಕ 'ಶಾಕುಂತಲ'ವನ್ನು 1883ರಲ್ಲಿ ಮೂಲದ ಸೌಂದರ್ಯ, ಲಾಲಿತ್ಯ , ಓಜಸ್ಸುಗಳಿಗೆ ಚ್ಯುತಿ ಬಾರದಂತೆ ಕನ್ನಡಕ್ಕೆ ಭಾಷಾಂತರಿಸಿದರು. 'ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ' ಅವರ ಅನೇಕ ನಾಟಕಗಳನ್ನು ರಂಗಭೂಮಿಯ ಮೇಲೆ ಪ್ರದರ್ಶಿಸಿತು. ಈ ಕೃತಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶ್ರೀ ಬಸವಪ್ಪ ಶಾಸ್ತ್ರಿಗಳ ಹೆಸರನ್ನು ಚಿರಸ್ಥಾಯಿಯಾಗಿಸಿತು. ಇವರ ವಿದ್ವತ್ ಪ್ರತಿಭೆಗೆ ಅಳಿಯ ಲಿಂಗರಾಜು ಅರಸರ ಪ್ರೋತ್ಸಾಹ ಅಪಾರವಾಗಿತ್ತು.
ಕೃಷ್ಣರಾಜಾಭ್ಯುದಯ ಎಂಬ ಕೃತಿಯನ್ನು ಚಂಪೂವಿನಲ್ಲಿ ರಚಿಸಿ ರಾಜಮನ್ನಣೆಗೆ ಪಾತ್ರರಾಗಿ ಆಸ್ಥಾನಕವಿ ಎನಿಸಿದರು. ಅಳಿಯ ಲಿಂಗರಾಜರಿಗೂ ದಿವಾನ್ ರಂಗಾಚಾರ್ಯರಿಗೂ ನಾಟಕದ ಗೀಳು ಬಹಳ ಇತ್ತು. ಆದ್ದರಿಂದ, 1882ರಲ್ಲಿ ಸ್ಥಾಪಿತವಾದ ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ಎಂಬ ಕಂಪನಿಗೆ ಹಲವು ನಾಟಕಗಳನ್ನು ಭಾಷಾಂತರಿಸಿ ಕೊಟ್ಟು ಕನ್ನಡ ರಂಗಭೂಮಿಗೂ ಅಮೂಲ್ಯ ಸೇವೆ ಸಲ್ಲಿಸಿದರು.
ಕನ್ನಡದಲ್ಲಿ ಅಭಿನಯ ನಾಟಕಗಳೇ ಇಲ್ಲದಿದ್ದಾಗ ಶಾಸ್ತ್ರಿಗಳು ಕನ್ನಡಿಸಿದ ’ರತ್ನಾವಳಿ ವಿಕ್ರಮೋರ್ವಶೀಯ, ಉತ್ತರರಾಮಚರಿತ ಮತ್ತು ಚಂಡಕೌಶಿ’ ನಾಟಕಗಳು ರಂಗದ ಮೇಲೆ ಪ್ರದರ್ಶನಗೊಂಡು ಜನರ ಮನ್ನಣೆ ಪಡೆದವು. ಕೇವಲ ಸಂಸ್ಕೃತ ನಾಟಕಗಳನ್ನಲ್ಲದೆ ಇಂಗ್ಲಿಷ್‍ನಿಂದ ಷೇಕ್ಸ್‌ಪಿಯರ್‌ನ ’ಒಥೆಲೊ’ ನಾಟಕವನ್ನು ’ಶೂರಸೇನ ಚರಿತ್ರೆ’ ಎಂಬ ಹೆಸರಿನಲ್ಲಿ ಕನ್ನಡಿಸಿದ ಕೀರ್ತಿಯೂ ಇವರದೇ, ದಿವಾನ್ ರಂಗಾಚಾರಲು ಅವರಂತಹ ಮಹಾನ್ ಪಂಡಿತೋತ್ತಮರಿಂದ ’ಅಭಿನವ ಕಾಳಿದಾಸ’ ಎಂಬ ಪ್ರಶಸ್ರಿಯನ್ನು ಪಡೆದಿದ್ದಾರೆ. ಅವರು 1891 ರಲ್ಲಿ ನಿಧನರಾದರು.