ಪ್ರೊ.ಬಿ. ಕೃಷ್ಣಪ್ಪ ಅವರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ- ಬಸಪ್ಪ, ತಾಯಿ- ಚೌಡಮ್ಮ. ದಲಿತ ಸಮುದಾಯದಲ್ಲಿ ಜನಿಸಿದ ಬಿ.ಕೃಷ್ಣಪ್ಪ ಅವರು ಬಾಲ್ಯದಲ್ಲಿ ಅನೇಕ ಅವಮಾನ, ಅಪಮಾನಗಳನ್ನು ಅನುಭವಿಸಿದರು. ಅಲ್ಲದೇ ಆ ಎಲ್ಲಾ ಅವಮಾನ ಅಪಮಾನಗಳ ವಿರುದ್ಧ ಪ್ರತಿರೋಧ ಒಡ್ಡುತ್ತಿದ್ದರು. ಎಲ್ಲಾ ಅಪಮಾನಗಳ ನಡುವೆಯೂ ಶಿಕ್ಷಣದತ್ತ ಗಮನ ಹರಿಸುತ್ತಿದ್ದ ಅವರು ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದು ಭದ್ರಾವತಿಯ ಸರ್.ಎಂ. ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿ ಆರಂಭಿಸಿದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸಿದ್ಧಾಂತಕ್ಕೆ ಬದ್ಧರಾಗಿದ್ದ ಕೃಷ್ಣಪ್ಪ ಬ್ರಾಹ್ಮಣರಾದ ಇಂದಿರಾ ಅವರನ್ನು ಪ್ರೀತಿಸಿ ಅಂತರ್ಜಾತಿಯ ವಿವಾಹವಾದರು. ಇದರಿಂದಾಗಿ ಸಂಪ್ರದಾಯವಾದಿಗಳ ಕೆಂಗೆಣ್ಣಿಗೆ ಗುರಿಯಾದರು. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಉಕ್ಕಿನ ಕಾರ್ಖಾನೆಯಲ್ಲಿ ನಡೆಯುತ್ತಿದ್ದ ದಲಿತರ ಮೇಲಿನ ದೌರ್ಜನ್ಯಗಳಿಂದಾಗಿ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದರು. 1974ರಲ್ಲಿ ಬಿ.ಕೆ ಅವರು ಟಿ.ರಾಜಣ್ಣ, ಎಸ್.ಟಿ. ರಾಜು, ಎನ್. ಗಿರಿಯಪ್ಪ, ಈರಯ್ಯ, ಬೋರಯ್ಯ ಮುಂತಾದ ದಲಿತ ನಾಯಕರ ಸಮ್ಮುಖದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿದರು. ಶೋಷಿತರ ಪರ ಹೋರಾಟಕ್ಕಿಳಿದು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಬಿ. ಕೃಷ್ಣಪ್ಪನವರ ಕುರಿತಾಗಿ ಕನ್ನಡದಲ್ಲಿ ಹಲವು ಕೃತಿಗಳು ಪ್ರಕಟವಾಗಿವೆ. ಬದುಕಿನುದ್ಧಕ್ಕೂ ತಾವು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿದ್ದ ಕೃಷ್ಣಪ್ಪ ಕರ್ನಾಟಕದ ದಲಿತ ಚಳುವಳಿಗಳ ಮಟ್ಟಿಗೆ ಮಹತ್ವದ ನಾಯಕರಾಗಿದ್ದರು.