ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ 1925ರ ನವೆಂಬರ್ 28ರಂದು ಜನಿಸಿದ ಕವಿ ಡಾ. ಬಿ.ಸಿ.ರಾಮಚಂದ್ರ ಶರ್ಮ ಅವರು ನವ್ಯ ಸಾಹಿತ್ಯ ಕಾಲ ಘಟ್ಟದ ಪ್ರಮುಖ ಲೇಖಕರಲ್ಲಿ ಒಬ್ಬರು. ನವೋದಯ ಮತ್ತು ಪ್ರಗತಿಶೀಲ ಚಳವಳಿಯ ಸಣ್ಣ ಕಥೆಗಳಿಗಿಂತ ಭಿನ್ನವಾದ ಹೊಸ ಸಂವೇದನೆಯ ಕಥೆಗಳನ್ನು ರಚಿಸಿದವರು. ಕನ್ನಡದ ಮೊತ್ತಮೊದಲ ನವ್ಯ ಕಥೆಗಾರ ಎಂದು ಗುರುತಿಸುವಷ್ಟರ ಮಟ್ಟಿಗೆ ಅವರ ಕಥೆಗಳ ಸಾಹಿತ್ಯದ ಧೋರಣೆ ವಿಶಿಷ್ಟವಾಗಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 'ಚಿಕವೀರರಾಜೇಂದ್ರ' ಕಾದಂಬರಿಯನ್ನು ಇಂಗ್ಲಿಷ್‌ಗೆ ಶರ್ಮ ಅನುವಾದಿಸಿದ್ದರು.
ಈ ಶತಮಾನದ ನೂರು ಇಂಗ್ಲಿಷ್ ಕವನಗಳು ಹಾಗೂ ಹಲವು ಕಥೆಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶರ್ಮಾ ಅವರ ಕೃತಿಗಳು- ಮಂದಾರ ಕುಸುಮ, ಏಳನೆಯ ಜೀವ, ಬೆಳಗಾಯಿತು, ಕತೆಗಾರನ ಕತೆ (ಕಥಾ ಸಂಕಲನಗಳು), ಏಳು ಸುತ್ತಿನ ಕೋಟೆ, ಬುವಿ ನೀಡಿದ ಸ್ಫೂರ್ತಿ, ಹೃದಯಗೀತ, ಹೇಸರಗತ್ತೆ, ಬ್ರಾಹ್ಮಣ ಹುಡುಗ, ಮಾತು-ಮಾಟ, ದೆಹಲಿಗೆ ಬಂದ ಹೊಸ ವರ್ಷ, ಸಪ್ತಪದಿ (ಕವನ ಸಂಗ್ರಹಗಳು). ಸೆರಗಿನ ಕೆಂಡ, ನೆರಳು, ಬಾಳಸಂಜೆ, ನೀಲಿ ಕಾಗದ, ವೈತರಣಿ (ನಾಟಕಗಳು).
ಶರ್ಮ ಅವರು 2005 ಏಪ್ರಿಲ್ 18ರಂದು ನಿಧನರಾದರು.