About the Author

ಅನಂತ ಪೈ ಅವರ ಪೂರ್ಣ ಹೆಸರು-ಕಾರ್ಕಳ ವೆಂಕಟ್ರಾಯ ಅನಂತ್ ಪೈ. ಕಾರ್ಕಳದಲ್ಲಿ 17-09-1929ರಂದು ಜನನ. ತಂದೆ ವೆಂಕಟ್ರಾಯ, ತಾಯಿ ಸುಶೀಲಾ. ಮಗು ಎರಡು ವರ್ಷವಿದ್ದಾಗ ತಂದೆ-ತಾಯಿ ತೀರಿಕೊಂಡರು. ಸಂಬಂಧಿಕರ ಸಹಕಾರದಲ್ಲಿ ಬೆಳೆದರು. ಮುಂಬೈನ ಮಾಹಿಮ್ ಓರಿಯೆಂಟಲ್ ಶಾಲೆಯಲ್ಲಿ ಶಿಕ್ಷಣ ನಂತರ ಮುಂಬೈ ವಿ.ವಿ.ಯಿಂದ ಕೆಮಿಕಲ್ ಟೆಕ್ನಾಲಜಿಯಲ್ಲಿ ಎರಡು ಪದವಿ ಪಡೆದರು. ಅಂಕಲ್ ಪೈ ಎಂದೇ ವಿಶ್ವಖ್ಯಾತಿ.

ವ್ಯಂಗ್ಯ ಚಿತ್ರಗಳು ಅಷ್ಟೇನೂ ಹೆಸರುಮಾಡಿರದ ಕಾಲದಲ್ಲಿ 'ಅನಂತ ಪೈ'ರವರು ಮಕ್ಕಳ ಮನಸ್ಸಿಗೆ ನಾಟುವಂತೆ ಸೃಷ್ಟಿಸಿದ ಕಥಾಚಿತ್ರಗಳು, ಅವರ ಕಥೆಯನ್ನು ಹೇಳುವ ಕೌಶಲ್ಯಕ್ಕೆ ಸಾಕ್ಷಿಯಾಗಿವೆ. ಮಕ್ಕಳ ಸುಸುಪ್ತ ಚೇತನವನ್ನು ಹುರಿಗೊಳಿಸಿ ಅತ್ಯಂತ ಕ್ಲಿಷ್ಟವಾದ ಪೌರಾಣಿಕ ಐತಿಹಾಸಿಕ ಕಥಾ ಸನ್ನಿವೇಷಗಳನ್ನು ಮಕ್ಕಳಿಗೆ ತಿಳಿಯುವ ರೀತಿಯಲ್ಲಿ ಹೇಳಿ ರಂಜಿಸಿದ ಕೀರ್ತಿ 'ಪೈ' ಅವರಿಗೆ ಸಲ್ಲುತ್ತದೆ. ಸ್ವತಃ ಆವರಿಗೆ ಮಕ್ಕಳಿಲ್ಲದಿದ್ದರೂ ವಿಶ್ವದ ಮಕ್ಕಳಿಗಾಗಿ ಅವರು ರಚಿಸಿದ ಕಥಾಚಿತ್ರಗಳು ಅಪಾರ. ಫೆಬ್ರವರಿ ೧೯ ರಂದು 'ಭಾರತದ ಮೊಟ್ಟಮೊದಲ ಕಾಮಿಕ್ಸ್ ಸಮಾವೇಶ'ದಲ್ಲಿ 'ಜೀವಮಾನದ ಸಾಧನೆ ಪ್ರಶಸ್ತಿ ' ಪಡೆದು ಸನ್ಮಾನಿಸಲ್ಪಟ್ಟರು.

'ಅಮರಚಿತ್ರ ಕಥೆಗಳ ಪುಸ್ತಕ'ಗಳಲ್ಲಿ 'ಪೈ'ರವರು ಹೆಣೆದಿರುವ 'ಪಂಚತಂತ್ರದ ಅದ್ಬುತ ಕಥೆಗಳು', 'ವಿಷ್ಣು ಶರ್ಮರ, ಜಾತಕ ಕಥೆ'ಗಳನ್ನುಆಧರಿಸಿವೆ.  ಅಮರ ಚಿತ್ರ ಕಥಾ ಸಂಗ್ರಹ, ಧೀರ-ಶೂರ-ಯೋಧರ ಜೀವನ ಕಥೆಯ ಚಿತ್ರಗಳು, ಸಾಂಪ್ರದಾಯಿಕ, ಜನಪದೀಯ ಕೃತಿಗಳ ಸಂಗಮ. 'ಅಮರಚಿತ್ರ ಕಥೆಗಳ ಪುಸ್ತಕಗಳು' ಈ ಕೃತಿಗಳು ಮಾರಾಟದಲ್ಲೂ ದಾಖಲೆ ನಿರ್ಮಿಸಿವೆ.

ತೆನಾಲಿರಾಮ, ಸಾವಿತ್ರಿ, ನಳ-ದಮಯಂತಿ,ವಸಂತಸೇನೆ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಶ್ರವಣಕುಮಾರ, ರಾಮ, ಪರಶುರಾಮ, ಶಿಶುಪಾಲ, ಜರಾಸಂದ ಹೀಗೆ ಹಲವು ಪಾತ್ರಗಳ, ವ್ಯಕ್ತಿಗಳ ಚಿತ್ರಗಳನ್ನು, ಅವುಗಳನ್ನು ಅಮರರಾಗಿಸಿದ್ದಾರೆ. 

ಇವರ ಸಾಧನೆಗಾಗಿ ಕೊಂಕಣಿ ಮಿಲೇನಿಯಂ ಪ್ರಶಸ್ತಿ, ಹಿಂದಿ ಸಾಹಿತ್ಯ ಅಕಾಡೆಮಿ, ಮಹಾರಾಷ್ಟ್ರ ರಾಜ್ಯಹಿಂದಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಣಿಪಾಲ್ ನ ಡಾ. ಟಿ.ಎಮ್.ಎ.ಪೈ ಸ್ಮಾರಕ ಪ್ರಶಸ್ತಿ, ಪ್ರಿಯದರ್ಶಿನಿ ಅಕಾಡೆಮಿ ಅವಾರ್ಡ್, 'ಚಂಢೀಗಡ್ ಸಂಸ್ಕೃತಿ ಸಂಸ್ಥಾನ್ ಭಾರತ್ ಗೌರವ್ ಪ್ರಶಸ್ತಿ, ಕಪೂರ್ ಚಂದ್ ಪ್ರಶಸ್ತಿ, ಮರಾಠಿ ಬಾಲ್ ಕುಮಾರ್ ಸಾ ಸಂಸ್ಥೆಯ ಅಧ್ಯಕ್ಷಪದವಿ ಗೌರವ ಸಂದಿದೆ. 24-02-2011 ರಂದು ನಿಧನರಾದರು. 

ಅನಂತ ಪೈ

(17 Sep 1929-24 Feb 2011)