ಲೇಖಕ ವಿಶ್ವನಾಥ ಅರಬಿ ಅವರು ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಾವೂರಿನವರು. ವಿಜಯಪುರದಲ್ಲಿ ವಾಸವಾಗಿದ್ದಾರೆ. ತಂದೆ ಬಸಪ್ಪ, ತಾಯಿ ಶಂಕ್ರಮ್ಮ, ವಿಜಯಪುರದಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ, ಪಿ ಯು ಸಿ.ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ, ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವಿ ಪಡೆದರು. ಕಾಲೇಜು ಹಂತದಲ್ಲಿ ಚರ್ಚಾ ಸ್ಪರ್ಧೆ,ಭಾಷಣ ಸ್ಪರ್ಧೆ, ಆಶುಭಾಷಣ, ದೇಶ ಭಕ್ತಿ ಗೀತೆ ಹೀಗೆ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಹಾಗೂ 2016-2017 ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಣಕು ಯುವ ಸಂಸತ್ತಿನಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಪಡೆದಿದ್ದಾರೆ. ಸಾಹಿತ್ಯ, ಚಿತ್ರಕಲೆ ಹಾಗೂ ಕಾಗದದ ಹಾಳೆಗಳಲ್ಲಿ ಕರಕುಶಲತೆಗಳನ್ನು ಮಾಡುವುದು, ಚುಟುಕುಗಳನ್ನು ರಚಿಸುವುದು ಇವರ ಹವ್ಯಾಸ. ಸದ್ಯ, ಗ್ರಾಮ ಲೆಕ್ಕಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕವಿತೆಗಳು, ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕೃತಿಗಳು: ವಿಶ್ವಚೇತನ (ಕವನ ಸಂಕಲನ), ವಿಶ್ವನ ಹಾಯ್ಕುಗಳು (ಹಾಯ್ಕು ಸಂಕಲನ), ಧರಣಿ ಮತ್ತು ಬದುಕು (ಚುಟುಕು ಸಂಕಲನ)