ಲೇಖಕ, ಪ್ರಬಂಧಕಾರ ವೀರೇಂದ್ರ ಸಿಂಪಿ ಅವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣದಲ್ಲಿ. ತಂದೆ ಜಾನಪದ ತಜ್ಞ ಸಿಂಪಿ ಲಿಂಗಣ್ಣ, ತಾಯಿ ಸೊಲಬವ್ವ. ಪ್ರಾರಂಭಿಕ ಶಿಕ್ಷಣ ಚಡಚಣದಲ್ಲಿ ಪೂರೈಸಿದ ಅವರು ಬಿಜಾಪುರದ ವಿಜಯಾ ಕಾಲೇಜಿನಿಂದ ಬಿ.ಎ. ಪದವಿ, ಕರ್ನಾಟಕ ವಿ.ವಿ.ಯಿಂದ ಎಂ.ಎ. ಪದವಿ ಪಡೆದರು. ಆನಂತರ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು 1999ರಲ್ಲಿ ನಿವೃತ್ತಿಯಾದರು. ತದನಂತರವೂ ಚಿದಂಬರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದರು.
ಶಾಲಾ ದಿನಗಳಿಂದಲೇ ಸಾಹಿತ್ಯದತ್ತ ಆಕರ್ಷಿತರಾಗಿದ್ದ ವೀರೇಂದ್ರ ಸಿಂಪಿ ಅವರು ಹೈಸ್ಕೂಲಿನಲ್ಲಿದ್ದಾಗಲೇ ‘ಖೊಟ್ಟಿ ನಾಣ್ಯ’ ಎಂಬ ಕತೆ ಬರೆದಿದ್ದು, ಆ ಕತೆ 'ಸಂಗಮ’ ಕೈ ಬರಹದ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಸಾಹಿತ್ಯದ ಒಡನಾಟದಲ್ಲೇ ಬೆಳೆದ ಅವರು ಇಂಗ್ಲಿಷ್ ಪ್ರಾಧ್ಯಾಪಕರಾದರೂ ಬರೆದದ್ದೆಲ್ಲವೂ ಕನ್ನಡದಲ್ಲೆ. ಅಂಕಣಕಾರರೆಂದೇ ಪ್ರಸಿದ್ಧಿ ಪಡೆದಿದ್ದ ವೀರೇಂದ್ರ ಅವರು ಹಲವಾರು ಕನ್ನಡ ಸಾಹಿತ್ಯ ಲೋಕದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಕಾಗದದ ಚೂರು, ಭಾವ ಮೈದುನ, ಸ್ವಚ್ಛಂದ ಮನದ ಸುಳಿಗಾಳಿ, ಪರಸ್ಪರ ಸ್ಪಂದನ, ಲಲಿತ ಪ್ರಬಂಧಗಳು, ಆಯ್ದ ಲಲಿತ ಪ್ರಬಂಧಗಳು, ಚನ್ನಬಸವಣ್ಣನವರ ವಚನಗಳು, ಬೀದರ ಜಿಲ್ಲಾ ದರ್ಶನ, ಬೀದರ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರು, ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವರ ‘ಭಾವಮೈದುನ’ ಲಲಿತ ಪ್ರಬಂಧಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ ದೊರೆತಿದೆ. ಅಲ್ಲದೇ ಅವರ ‘ಸ್ವಚ್ಛಂದ ಮನದ ಸುಳಿಗಾಳಿ’ ಪ್ರಬಂಧ ಸಂಕಲನ ಕರ್ನಾಟಕ ವಿಶ್ವವಿದ್ಯಾಲಯ, ಶಿವಾಜಿ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಮೊದಲ ಬಿ.ಎ. ಪಠ್ಯವಾಗಿ ಆಯ್ಕೆಯಾಗಿತ್ತು. ಜೊತೆಗೆ ಅವರ ‘ಪರಿಸರ ಸ್ಪಂದನ’ಕ್ಕೆ ಗುಲಬರ್ಗಾ ವಿ.ವಿ.ಯ ಬಹುಮಾನ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಯೂ ದೊರೆತಿದೆ. ಇನ್ನೂ ವಿಜಾಪುರ, ಬೀದರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿದ್ದಾರೆ.