About the Author

ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಶಿವರಾಮ ಅಸುಂಡಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಅಸುಂಡಿ ಗ್ರಾಮದವರು. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಆರಂಭಿಸಿ ಮಾಧ್ಯಮದೊಂದಿಗೆ ನಂಟು ಬೆಳೆಸಿಕೊಂಡರು.

ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿ ಪಡೆದಿರುವ ಅವರು ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಲೇ ಮಾಧ್ಯಮ ಕ್ಷೇತ್ರ ಪ್ರವೇಶಿಸಿದರು. ಬಳ್ಳಾರಿಯ ’ಈ ನಮ್ಮ ಕನ್ನಡ ನಾಡು’ ದೈನಿಕದಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ .ಟಿ.ವಿ.ಗೆ ಸೇರಿ ಹಾವೇರಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. 2004ರಿಂದ ಕಲಬುರಗಿಯಲ್ಲಿ ಈಟಿವಿ ಪ್ರತಿನಿಧಿಯಾಗಿದ್ದಾರೆ. 
’ದು.ನಿಂ.ಬೆಳಗಲಿ ಅವರ ದೇವದಾಸಿ’ ಕಾದಂಬರಿ ಕುರಿತು ಎಂ.ಫಿಲ್. ಪದವಿ ಮಾಡಿರುವ ಅಸುಂಡಿ ಅವರು ಡಾ.ಮಲ್ಲಿಕಾ ಘಂಟಿ ಮಾರ್ಗದರ್ಶನದಲ್ಲಿ ’ದಲಿತ ಕಾದಂಬರಿಗಳಲ್ಲಿ ಸಾಂಸ್ಕೃತಿಕ ಲೋಕ’ ಕುರಿತು ಪಿಎಚ್.ಡಿ. ಪದವಿ ಪಡೆದಿದ್ದಾರೆ. 
ಹೈದರಾಬಾದ್ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ದೇವದಾಸಿ ಪದ್ಧತಿ, ಅಳಿದು ಹೋಗುತ್ತಿರುವ ತೊಗಲುಗೊಂಬೆಯಾಟ, ದೊಡ್ಡಾಟ ಮೊದಲಾದವುಗಳ ಮೇಲೆ ಬೆಳಕು ಚೆಲ್ಲುವ ಲೇಖನಗಳನ್ನು ಬರೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಹಲವಾರು ರಂಗ ಕಲಾವಿದರನ್ನು, ಚಿತ್ರ ಕಲಾವಿದರನ್ನು ಸರದಿ ರೂಪದಲ್ಲಿ ಲೇಖನ ಪ್ರಕಟಿಸಿ ಗಮನ ಸೆಳೆದಿದ್ದಾರೆ. ಹಲವಾರು ವಿಷಗಳ ಮೇಲೆ ಬೆಳಕು ಚೆಲ್ಲುವ ಇವರ ಲೇಖನ ಪ್ರಕಟಿಸಿದ್ದಾರೆ.
ಗುಲ್ಬರ್ಗಾ ವಿಶ್ವವಿದ್ಯಾಲಯದ ಜಯತೀರ್ಥ ರಾಜಪುರೋಹಿತ ಸ್ಮಾರಕ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಅಸುಂಡಿ ಅವರ ’ದೆವ್ವ ಬಂತ್ ದೆವ್ವ’ ಕಥೆ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪ್ರಶಸ್ತಿ ಸಂದಿದೆ. ’ನೀರ ಹೆಣ’ ಕಥೆಯ ನಾಟಕ ರೂಪಾಂತರ ಕಲಬುರಗಿ ಆಕಾಶವಾಣಿಯಲ್ಲಿ ಪ್ರಸಾರಗೊಂಡು ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿಗೆ ತನ್ನದಾಗಿಸಿಕೊಂಡಿದೆ.   
2006ನೇ ಸಾಲಿನ ’ಅಭಿವೃದ್ಧಿ ಪತ್ರಿಕೋದ್ಯಮ’ ಪ್ರಶಸ್ತಿ,  ಗುಲ್ಬರ್ಗಾ ವಿ.ವಿ.ಯ ರಾಜ್ಯೋತ್ಸವ ಪ್ರಶಸ್ತಿ ಮತ್ತು ಶ್ರೀವಿಜಯ ಪ್ರಶಸ್ತಿಗಳು ಸಂದಿವೆ. ದಲಿತ ಸಾಂಸ್ಕೃತಿಕ ಲೋಕ ಕೃತಿಗೆ ದಲಿತ ಸಾಹಿತ್ಯ ಪರಿಷತ್‌ನ ’ದಶಮಾನ ಸಂಭ್ರಮ ಪ್ರಶಸ್ತಿ’ ದೊರೆತಿದೆ. ’ಹೆಣ್ಣೆಂದರೆ’ ಕಥಾ ಸಂಕಲನಕ್ಕೆ ಕನ್ನಡ ನಾಡು ಲೆಖಕರ ಮತ್ತು ಓದುಗರ ಸಹಕಾರ ಸಂಘದ ’ಕನ್ನಡ ನಾಡು ಸಾಹಿತ್ಯ ಕೃಷಿ ಪ್ರಶಸ್ತಿ’ ಸಂದಿದೆ. 
ಸದ್ಯ ನ್ಯೂಸ್18 ಕನ್ನಡ ಸುದ್ದಿ ವಾಹಿನಿಯಲ್ಲಿ ಮುಖ್ಯ ವರದಿಗಾರರಾಗಿ ಕಲಬುರ್ಗಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಡಾ. ಶಿವರಾಮ ಅಸುಂಡಿ ಅವರ ಕೃತಿಗಳು
ದಲಿತ ಸಾಂಸ್ಕೃತಿಕ ಲೋಕ(2007),  ಎಲೆಕ್ಟ್ರಾನಿಕ್ ಮಾಧ್ಯಮ (2009), ಹೈದರಾಬಾದ ಕರ್ನಾಟಕ ಸಮೂಹ ಮಾಧ್ಯಮ (2010), ತಳ ಸಂಸ್ಕೃತಿ (2011),  ಮಕ್ಕಳು ಬೇಕೆ ಮಕ್ಕಳು (2011),    ಸಾಹಿತ್ಯೋಪಾಸಕರು (2011), ಗಂಡಂದಿರಿಗೆ ಜೈಹೋ ..! (2012),  ಮಾಧ್ಯಮ ರಾಜಕಾರಣ (2012), ಹೆಣ್ಣೆಂದರೆ..? (2013), ಮಾಧ್ಯಮ ಮೌಢ್ಯ (2013), ಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕ (2014),  ಅಮ್ಮಾ ಕೊಲ್ಬ್ಯಾಡ..!? (2014),  ಕಲಬುರಗಿ ಮಾಧ್ಯಮ (2015),  ದೆವ್ವ ಬಂತ್ ದೆವ್ವ..!? (2016).
 

ಶಿವರಾಮ ಅಸುಂಡಿ