About the Author

ಕನ್ನಡ ಸಂಪಾದನಾ ಶಾಸ್ತ್ರಕ್ಕೆ ಬುನಾದಿ ಹಾಕಿದ ಸಂ.ಶಿ. ಭೂಸನೂರಮಠರು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ನಿಡಗುಂದಿ ಗ್ರಾಮದವರು. ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠರು 1910ರ ನವೆಂಬರ್ 7ರಂದು. ತಂದೆ ಶಿವಮೂರ್ತಯ್ಯ, ತಾಯಿ ರಾಚಮ್ಮ. ಕಡುಬಡತನದ ಕುಟುಂಬದಲ್ಲಿ ಜನಿಸಿದ ಸಂಗಯ್ಯ ಅವರು ಆರಂಭಿಕ ಶಿಕ್ಷಣವನ್ನು ನಿಡಗುಂದಿಯಲ್ಲಿ ಪಡೆದರು. ಮಾಧ್ಯಮಿಕ ಶಿಕ್ಷಣವನ್ನು ಗದುಗಿನಲ್ಲಿ ಪಡೆದ ಅವರು ಹಣಕಾಸಿನ ತೊಂದರೆಯಿಂದಾಗಿ ಓದು ನಿಲ್ಲಿಸಬೇಕಾದ ಸಂದರ್ಭ ಎದುರಾಯಿತು. ಎದೆಗುಂದದ ಅವರು ಪೆಟ್ರೋಲ್ ಬಂಕ್ ನಲ್ಲಿ ಪಂಪ್ ಒತ್ತುವ ಕೆಲಸ ಮಾಡಿ ಮ್ಯಾಟ್ರಿಕ್ ಮುಗಿಸಿದರು. ನಂತರ 1931ರಲ್ಲಿ ಕಾಲೇಜು ಶಿಕ್ಷಣಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು.

ಬಾಲ್ಯದ ದಿನಗಳಿಂದಲೂ ಓದಿನಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಸಂಗಯ್ಯ ಅವರು ಧಾರವಾಡದ ಸಾಂಸ್ಕೃತಿಕ ಪರಿಸರ ಮತ್ತು ಉತ್ತಮ ಶಿಕ್ಷಕರ ಮಾರ್ಗದರ್ಶನದಿಂದಾಗಿ ಪ್ರಥಮ ಶ್ರೇಣಿಯಲ್ಲಿ ಸ್ನಾತಕ (ಬಿ.ಎ.) ಪದವಿ ಪಡೆದರು.  ಎಂಎ ವ್ಯಾಸಂಗಕ್ಕಾಗಿ ಕೊಲ್ಲಾಪುರಕ್ಕೆ ತೆರಳಿ ಸ್ನಾತಕೋತ್ತರ ಪದವಿ (1937) ಯನ್ನು ಪ್ರಥಮ ರ್‍ಯಾಂಕಿನೊಂದಿಗೆ ಪಡೆದರು.

ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್‍ಯಾರಂಭ ಮಾಡಿದ ಅವರು  23 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದರು. ನಿವೃತ್ತಿಯ 1966ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲವು ಕಾಲ ಯುಜಿಸಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು.

ಶಾಸ್ತ್ರೀಯವಾಗಿ ಹಾಗೂ ವೈಜ್ಞಾನಿಕವಾಗಿ ವೀರಶೈವ ದರ್ಶನ ಅಧ್ಯಯನ ಮಾಡಿದ ಅವರು ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ. 'ಭಕ್ತಿಸುಧಾಸಾರ', 'ಗುರುರಾಜ ಚಾರಿತ್ರ', 'ಮೋಳಿಗಯ್ಯನ ಪುರಾಣ', 'ಲಿಂಗಲೀಲಾವಿಲಾಸ ಚಾರಿತ್ರ', 'ಪ್ರೌಢರಾಯನ ಕಾವ್ಯ', 'ವಚನ ಸಾಹಿತ್ಯ ಸಂಗ್ರಹ', 'ಏಕೋತ್ತರ ಶತಸ್ಥಲ, ’ಶೂನ್ಯ ಸಂಪಾದನೆಯ ಸಂಪುಟಗಳು' ಪ್ರಮುಖವಾದವುಗಳು.

ವಚನ ಸಾಹಿತ್ಯದ ಸಾರ ಪ್ರತಿಬಿಂಬಿಸುವ, ಶಿವಶರಣರ ಸತ್ಯಾನುಭಾವದ ಸಾಕ್ಷಾತ್ಕಾರ, ಭಾರತೀಯತತ್ವ ಮತ್ತು ಅನುಭಾವ-ಶಾಸ್ತ್ರಗಳಲ್ಲಿ ಬರುವ ಭಕ್ತಿ, ಜ್ಞಾನ, ಯೋಗ ಮತ್ತು ಕ್ರಿಯೆಗಳ ಸಮನ್ವಯವನ್ನು 'ಶೂನ್ಯ ಸಂಪಾದನೆಯ ಪರಾಮರ್ಶೆ’ಯಲ್ಲಿ ಕಾಣಬಹುದು. ಪರಾಮರ್ಶೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1972) ಮತ್ತು ಪಂಪ ಪ್ರಶಸ್ತಿ (1990) ಸಂದಿವೆ. 25,000 ಪಂಕ್ತಿಗಳಿರುವ ಆರು ಕಾಂಡಗಳ 'ಭವ್ಯ ಮಾನವ' ದ ಅಕ್ಕ ಮಹಾದೇವಿಯನ್ನು ಕುರಿತ ಮಹಾಕಾವ್ಯ. ಕರ್ನಾಟಕ ಸಾಹಿತ್ಯ ಅಕಾಡೆಮಿಯು 1983ರಲ್ಲಿ ಭವ್ಯಮಾನವ ಕಾವ್ಯಕ್ಕೆ ’ಉತ್ತಮ ಸೃಜನಶೀಲ ಕೃತಿ' ಪ್ರಶಸ್ತಿ ನೀಡಿತು. ಖ್ಯಾತ ಕವಿ ಚಂದ್ರಶೇಖರ ಕಂಬಾರ ಅವರು ಭೂಸನೂರುಮಠ ಅವರ ಶಿಷ್ಯರು.

ಕನ್ನಡ ಸಂಪಾದನಾಶಾಸ್ತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದ ಭೂಸನೂರಮಠರು 1991ರ ನವೆಂಬರ್ 6 ರಂದು ನಿಧನರಾದರು.

ಸಂ.ಶಿ. ಭೂಸನೂರಮಠ

(07 Nov 1910-06 Nov 1991)

Awards