ರಾವ ಬಹಾದ್ದೂರ ಎಂದೇ ಖ್ಯಾತಿಯ ರಾಮಚಂದ್ರ ರಾವ್ ಕುಲಕರ್ಣಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೆಪಡಸಲಗಿಯಲ್ಲಿ 24-09-1910ರಲ್ಲಿ ಜನಿಸಿದರು. ತಂದೆ ಭೀಮರಾವ್, ತಾಯಿ ಸುಭದ್ರಾಬಾಯಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ (1935) ಬಿ.ಎ. ಪದವಿ ಪಡೆದರು. ಸ್ವಾತಂತ್ಯ್ರ ಯೋಧ ಕೌಜಲಗಿ ಹಣಮಂತರಾಯ ಜೊತೆಗೂಡಿ ‘ಚರಕ ಸಂಘ ಸೇರಿ ಅದರ ವ್ಯವಸ್ಥಾಪಕರೂ ಆದರು. ಸಂಯುಕ್ತ ಕರ್ನಾಟಕ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದರು.ಬಾಂಗ್ಲಾದೇಶ ರಚನೆಯಾದಾಗ ಅವರು ಬಾಂಗ್ಲಾಕ್ಕೆ ತೆರಳಿ ‘ನಾ ಕಂಡ ಬಾಂಗ್ಲಾದೇಶ’ ಎಂಬ ಗ್ರಂಥ ಬರೆದರು.
ಕೃತಿಗಳು: ಅಸುರಾಯಣ, ಸಾಮ್ಯವಾದ, ಇತಿಹಾಸ ಭೂತ, ವೃಂದಾವನ, ಕಾಂಚನಮೃಗ, ಧೂಮಕೇತು, ಬಾಳು ಬಂಗಾರ, ಮುತ್ತು ಕಟ್ಟಿದಳು ಹೀಗೆ ಹಲವಾರು ಕಾದಂಬರಿ ಬರೆದಿದ್ದು, ಬಿತ್ತಿ ಬೆಳೆದವರು ಹಾಗೂ ಗೌಡರ ಕೋಣ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿದೆ. ಇವರ ಗ್ರಾಮಾಯಣ ಕಾದಂಬರಿಯು ಕನ್ನಡ ಭಾಷೆಯ ಹತ್ತು ಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಎಂದು ಪರಿಗಣಿತವಾಗುತ್ತಿದೆ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ದೇಶದ ವಿವಿಧ ಭಾಷೆಗಳಲ್ಲಿ ಅನುವಾದಗೊಂಡಿದೆ. ರಾವ್ ಬಹಾದ್ದೂರ್ ಅವರು 31-12-1984 ರಂದು ನಿಧನರಾದರು.