ರಾಮಚಂದ್ರ ಎಸ್. ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಪಿಯುಸಿಯಲ್ಲಿ ʻಅತ್ಯುತ್ತಮ ವಿದ್ಯಾರ್ಥಿʼ ರೋಲಿಂಗ್ ಶೀಲ್ಡ್ ಪಡೆದು ಮುಂದೆ ಧಾರವಾಡ ಕ.ವಿ.ವಿ. ಯಲ್ಲಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಬ್ಯಾಂಕ್ ಸೇವೆಯಲ್ಲಿದ್ದ ಇವರು ಸ್ವಯಂ ನಿವೃತ್ತಿ ಹೊಂದಿದ್ದಾರೆ. ಬರವಣಿಗೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಕುಲಕರ್ಣಿ ಅವರು, ಹಲವಾರು ಕೃತಿಗಳನ್ನು ಬರೆದಿದ್ದಾರೆ. ಅದರಲ್ಲಿ ಕಥಾಸಂಕಲನ, ಕವನ ಸಂಕಲನ, ಲಲಿತ ಪ್ರಬಂಧ, ವೈಚಾರಿಕ ಹಾಗೂ ವಿಮರ್ಶಾ ಲೇಖನಗಳು, ಹಾಗೂ ಮಿಡಿಗವನಗಳು ಸೇರಿವೆ. ಇವರ ʻಕಥೆಗಳಲ್ಲದ ಕಥೆಗಳುʼ ಸಂಕಲನಕ್ಕೆ ʻಅಪ್ಪʼ ಪ್ರಶಸ್ತಿ, ಮುಂಬೈನ ʻಗೋಕುಲವಾಣಿʼ ಯುಗಾದಿ ಕಥಾ ಸ್ಪರ್ಧೆಯಲ್ಲಿ ʻಸಕ್ಕರೆ ಬೊಂಬೆʼ ಕತೆಗೆ ಪ್ರಥಮ ಬಹುಮಾನ, ಮುಂಬೈನ ʻಮುಂಬೆಳಕು ಕಥಾ ಸ್ಪರ್ಧೆʼಯಲ್ಲಿ ʻಕಾಕಾʼ ಕತೆಗೆ ದ್ವಿತೀಯ ಬಹುಮಾನ ಹೀಗೆ ಅನೇಕ ಪ್ರಶಸ್ತಿಗಳು ಸಂದಿವೆ. ಕೃತಿಗಳು: ಕಥೆಗಳಲ್ಲದ ಕಥೆಗಳು, ಅಳಿಲೆಂಬ ನಾನು, ಹೂ-ಮಳೆ, ಹಾಯ್! ಹಾಯ್ಕುʼ, ʻಪುಟʼಕ್ಕಿಷ್ಟು ಕತೆಗಳು, ನಕ್ಷತ್ರ ಬೆಳಕು, ಮರವಾಗಲಿ ಮರುಜನ್ಮ, ಶಾಯರಿ ಸಿಂಚನ ಇನ್ನೂ ಹಲವು..