ಮೋಹನ್ ವರ್ಣೇಕರ್ ಅವರದ್ದು ಕಲೆ ಹಾಗೂ ಸಾಹಿತ್ಯ ಎರಡೂ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದವರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸಪಟ್ಟಣದಲ್ಲಿ 1950 ಜೂನ್ 22ರಂದು ಜನಿಸಿದರು. ತಂದೆ ವಾಸುದೇವ ಶೇಟ್, ತಾಯಿ ತುಳಸಿಬಾಯಿ. ಬಿ.ಎ. ಪದವಿಯೊಂದಿಗೆ ಟೈಪಿಂಗ್ ಮತ್ತು ಶೀಘ್ರಲಿಪಿಯಲ್ಲಿ ರ್ಯಾಂಕ್ ಪಡೆದಿದ್ದಾರೆ. ಕರ್ನಾಟಕ ವಿಧಾನ ಸಭೆಯ ಸಚಿವಾಲಯದಲ್ಲಿ ಅಭಿಲೇಖನಾಧಿಕಾರಿಯಾಗಿ (RECORDING OFFICER) ಸೇವೆಗೈದು ಸ್ವಯಂ ನಿವೃತ್ತಿ. ಪ್ರಸ್ತುತ ಮೈಸೂರಿನಲ್ಲಿ ನೆಲೆ. ಪ್ರಶಸ್ತಿ, ಪ್ರಾಪ್ತಿ, ಪ್ರೇಮಿಸಿದವರು, ಅವಳು ಕ್ಷಮಾತೀತಳು, ನರಸಿಂಹ ದೇವರಿಗಿಟ್ಟ ಚಿನ್ನದ ಕಿರೀಟ ಅವರ ಪ್ರಮುಖ ಕತಾ ಸಂಕಲನಗಳು.
ಅವರ ಮೊದಲ ಕಾದಂಬರಿ ‘ದಿಕ್ಕು’. ಪ್ರೀತಿ-ಪ್ರೇಮಗಳ ನಡುವೆ, ಸ್ವರ್ಣ ಮಂದಾರ, ಕಪ್ಪುಬಾನಲ್ಲಿ ಚಂದಿರ ಅವರ ಮತ್ತಿತರ ಕಾದಂಬರಿಗಳು. ಮಕ್ಕಳ ಸಾಹಿತ್ಯದಲ್ಲೂ ಕೃಷಿ ಸಾಧಿಸಿರುವ ಅವರು ನಮ್ಮ ಅಕ್ಕ, ಆದರ್ಶ ಗೆಳೆಯ, ಬಹುಮಾನ, ದಶಾವತಾರಗಳು, ಬಂಗಾರದ ಪೆಟ್ಟಿಗೆ, ನೀತಿ ಬೋಧಕ ಮಕ್ಕಳ ರಾಮಾಯಣ, ಪ್ರಚಂಡ ಚೋರರು, ಧೀರ ಪುಟಾಣಿ ಹಾಗೂ ಮೂರು ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಜಾಣಮರಿ; ಮೊಗ್ಗು - ಶಿಶುಗೀತೆಗಳ ಸಂಗ್ರಹ.
ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ‘ಆಕರ್ಷಕ ವ್ಯಕ್ತಿತ್ವವನ್ನೂ ಬೆಳೆಸಿಕೊಳ್ಳುವುದು ಹೇಗೆ?, ವ್ಯಕ್ತಿತ್ವ ವಿಕಸನ ಮಾರ್ಗದರ್ಶಿ, ಆಕರ್ಷಕ ವ್ಯಕ್ತಿತ್ವ ನಿಮ್ಮದಾಗಲಿ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಮಾನಸಿಕ ಆರೋಗ್ಯ ಸುಖೀ ದಾಂಪತ್ಯ ಜೀವನದ ಸಹಬಾಳ್ವೆಗೆ ಸಂಬಂಧಿಸಿದ ಕೃತಿಗಳಾದ ಮಾನಸಿಕ ಒತ್ತಡ-ನಿವಾರಣೋಪಾಯಗಳು, ಮಾನಸಿಕ ಒತ್ತಡ ಕಾಡುತ್ತಿದೆಯೇ? ಮನೋಖಿನ್ನತೆ, ನಿರ್ಲಕ್ಷ್ಯಬೇಡ, ಆತಂಕದಿಂದ ಹೊರಬನ್ನಿ, ಡಿಪ್ರೆಷನ್ ನಿವಾರಣೆಗೆ 108 ಸಲಹೆಗಳು, ಅಂತಃಪುರದ ಅಂತರಂಗದ ಮಾತು, ಪತಿ-ಪತ್ನಿ ಸುಖವಾಗಿರಬೇಕು? ಅವರ ಮತ್ತಿತರ ಕೃತಿಗಳು.
ಕಥಾಸಂಗ್ರಹ ‘ವರ್ಷ’, ನೂರು ಕವಿಗಳ ನೂರು ಕವನಗಳ ಸಂಗ್ರಹ ‘ಶತಮಾನ’, ಐವತ್ತು ಕವಿಗಳ ಕವನ ಸಂಗ್ರಹ ‘ಗುಚ್ಛ’, ಜೊತೆಗೆ ತಜ್ಞ ವೈದ್ಯರುಗಳು ಬರೆದ ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳ ಕೃತಿ ‘ಆರೋಗ್ಯಸಂಜೀವಿನಿ’, ಎಸ್.ಡಿ. ಗಾಂವ್ಕರ್ ವ್ಯಕ್ತಿ ಪರಿಚಯದ ಗ್ರಂಥ, ಸಂಪಾದಿತ ಕೃತಿ ಸೇರಿದಂತೆ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಇವರು ಚುಕ್ಕಿ ಚಿತ್ರಕಲೆಯನ್ನು ತಾಳ್ಮೆ, ಏಕಾಗ್ರತೆ, ದೃಢಸಂಕಲ್ಪದಿಂದ ಸಿದ್ಧಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಹೊರ ತಂದಿರುವ ‘ಸಾಲು ದೀಪಗಳು’ ಪರಿಷ್ಕೃತ (2001) ಆವೃತ್ತಿಯಲ್ಲಿ ಚುಕ್ಕಿ ಚಿತ್ರಗಳು, ಕನಕಪುರದಲ್ಲಿ ನಡೆದ 68ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭಕ್ಕಾಗಿ ಕಾರ್ಡ್ ರೂಪದಲ್ಲಿ ಕನ್ನಡ ಸಾಹಿತ್ಯ ಪರಷತ್ತಿಗಾಗಿ ಚುಕ್ಕಿಚಿತ್ರಗಳ ರಚನೆ, ಕನ್ನಡ ಪ್ರಸಿದ್ಧ ನೂರು ಸಾಹಿತಿಗಳ ಚುಕ್ಕಿ ಭಾವಚಿತ್ರ ಮತ್ತು ಪರಿಚಯವನ್ನೊಳಗೊಂಡ ಗ್ರಂಥ ‘ಚುಕ್ಕಿಚಿತ್ರದಲ್ಲಿ ಶತಸಾಹಿತ್ಯ ಪ್ರತಿಭೆ’ ಪ್ರಕಟವಾಗಿದೆ.
ಇವರ ವಿವಿಧ ಪ್ರಕಾರದ ಕಲೆ-ಸಾಹಿತ್ಯದ ಚಟುವಟಿಕೆಗಳಿಗಾಗಿ ಗೊರೂರು ಸಾಹಿತ್ಯ ಪ್ರಶಸ್ತಿ, ಕನ್ನಡಸಿರಿ, ರಾಜಕುಮಾರ್ ಸದ್ಭಾವನ ಪುರಸ್ಕಾರ, ಬಸವನಗುಡಿ ರತ್ನ, ದೈವಜ್ಞ ಭೂಷಣ ಮುಂತಾದ ಪ್ರಶಸ್ತಿಗಳು ಅವರನ್ನರಸಿವೆ.