ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ 1958ರ ಏಪ್ರಿಲ್ 01 ರಂದು ಲೇಖಕ ಮಹಾಬಲಮೂರ್ತಿ ಕೊಡ್ಲೆಕೆರೆ ಜನಿಸಿದರು. ತಂದೆ ಗಜಾನನ ಅನಂತ ಭಟ್ಟ, ತಾಯಿ ಭೂದೇವಿ . ಗೋಕರ್ಣ, ಕುಮಟಾದ ಕಾಲೇಜಿನಿಂದ ಬಿ.ಎಸ್ಸಿ.ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವೀಧರರು. ಜ್ಯೋತಿಷ್ಯ ಶಾಸ್ತ್ರದಲ್ಲಿ ಪಡೆದ ಡಿಪ್ಲೊಮಾ ಪಡೆದರು. ಕರ್ನಾಟಕ ಬ್ಯಾಂಕ್ ನಲ್ಲಿ ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದಾರೆ.
ಕೃತಿಗಳು: ಮತ್ತೇಳಲು ಪೂರ್ವದಿಂದ ಕವನ ಸಂಕಲನಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ ಬಂದಿದೆ. ಮಾತು ಮತ್ತು ಪರಸ್ಪರ, ಜೀವ (ಕವನ ಸಂಕಲನಗಳು), ಚಂದ್ರಾಸ್ತಮಾನ (ಕಾದಂಬರಿ), ಕಥಾಸಂಕನಗಳು – ‘ಮತ್ತೊಂದು ಮೌನ’, ‘ಯಕ್ಷಸೃಷ್ಟಿ’, ‘ಅವನ ಜಗತ್ತಿನ ಹಗಲು’, ‘ನೆರಳು’, ‘ಇತಿಹಾಸದ ನಂತರ, ನೆರಳು ಮತ್ತು ಇತರ ಆಯ್ದ ಕಥೆಗಳು’.‘ಸದ್ದು’, ‘ಸ್ತ್ರೀಶಾಪ’, ‘ಬೀಜಗರ್ಭ’ ಕಾದಂಬರಿಗಳು, ‘ಅದಲು ಬದಲು’, ‘ಹಿಡಿಯದೇ ಉಳಿದ ಹಾದಿ’ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿಯವರ ಪ್ರಸಿದ್ಧ ಕತೆ ‘ವೆಂಕಟಗನ ಹೆಂಡತಿ’ ನಾಟಕಕ್ಕೆ ಅಳವಡಿಸಿದ್ದಾರೆ.
ಕನ್ನಡ ಹಾಗೂ ಇಂಗ್ಲಿಷ್ ಪತ್ರಿಕೆಯ ಅಂಕಣಕಾರರೂ ಆಗಿದ್ದು, ‘ಭಿನ್ನ ವಿಭಿನ್ನ ಕಥೆಗಳೊಂದಿಗೆ’ ಅಂಕಣಗಳ ಬರಹ ಪ್ರಕಟವಾಗಿದೆ ಕೆ.ಎಸ್. ನರಸಿಂಹಸ್ವಾಮಿಯವರ ಅಭಿನಂದನ ಗ್ರಂಥ ‘ಶ್ರೀ ಕೆ.ಎಸ್.ಎನ್’ ಮತ್ತು ಗೋಪಾಲಕೃಷ್ಣ ಅಡಿಗರ ‘ಅಡಿಗ-70 (ಸಂಪಾದನೆಗಳು) 50 ಜನ ಹಿರಿಯ ಯಕ್ಷಗಾನ ನಟರನ್ನು ಚಂದನ ವಾಹಿನಿಗಾಗಿ ಸಂದರ್ಶನ ಯಕ್ಷಗಾನ ಕಥನ ಸಂವಾದಗಳನ್ನು ನಡೆಸಿಕೊಟ್ಟಿದ್ದಾರೆ. ಕರ್ನಾಟಕದ ಬಡಗು ಮತ್ತು ತೆಂಕು ಯಕ್ಷಗಾನ ವೇಷಗಳ ಕುರಿತಾದ ಸಾಕ್ಷಚಿತ್ರ ರಚಿಸಿದ್ದಾರೆ. ಅಮೆರಿಕದ ಕನ್ನಡಿಗರ ಕೂಟವಾದ ‘ಅಕ್ಕ’ ಮತ್ತು ಇಂಗ್ಲೆಂಡಿನ ‘ಮಿಲೇನಿಯಂ ಕನ್ನಡ ಹಬ್ಬ’ಗಳಿಗಾಗಿ ಭೀಮ, ಸುಭದ್ರಾ, ಚಾಣೂರ ಪಾತ್ರಧಾರಿಗಳಾಗಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಕವಿತಾ ಲಂಕೇಶ್, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ನಟನೆ, ಚಲನಚಿತ್ರಗೀತೆಗಳನ್ನು ರಚಿಸಿದ್ದಾರೆ. ಪ್ರಜಾವಾಣಿ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಪುರಸ್ಕಾರ ಪಡೆದ ಕಥೆ ‘ವೈಶಂಪಾಯನ ತೀರ’ವು, ‘ಕಾಲದ ಕಡಲು’ ಹೆಸರಿನಿಂದ ಮೆಗಾ ಧಾರಾವಾಹಿಯಾಗಿದ್ದಲ್ಲದೆ, ಪ್ರೊ. ಸಿ.ಜಿ. ಕೃಷ್ಣಸ್ವಾಮಿ ನಿರ್ದೇಶನದಲ್ಲಿ ನಾಟಕವಾಗಿ ಬೆಂಗಳೂರು, ದೆಹಲಿ, ಚಂಡೀಘಡ, ಮುಂಬೈ, ಫರೀದಾಬಾದ್, ಮಂಗಳೂರು, ಸಿಮ್ಲಾ ಇತರೆಡೆ 50ಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ. ಸಣ್ಣ ಕಥಾಲೋಕದಲ್ಲಿಯೇ ಅಪರೂಪದ ಪತ್ರಿಕೆ ಎನಿಸಿರುವ ‘ಒಂದಲ್ಲ ಒಂದೂರಿನಲ್ಲಿ’ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದು, ಕವಿ ಮುದ್ದಣ ಕಾವ್ಯ ಪುರಸ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ, ಕರ್ನಾಟಕ ವಿಕಾಸ ರತ್ನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ಲಭಿಸಿವೆ.