ಲೇಖಕ ಹುಲಿಕಟ್ಟಿ ಚನ್ನಬಸಪ್ಪ ಅವರು ಮೂಲತಃ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯವರು. ತಂದೆ- ಲಕ್ಷ್ಮಣ, ತಾಯಿ- ಲಕ್ಷ್ಮಮ್ಮ. ಮೊಳಕಾಲ್ಮೂರು ತಾಲೂಕಿನ ಅಮುಕುಂದಿ ಹಾಗೂ ಭೈರಾಪುರದಲ್ಲಿಪ್ರಾಥಮಿಕ ಶಿಕ್ಷಣ, ಹೂವಿನಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಮಾಧ್ಯಮಿಕ ಶಿಕ್ಷಣ ಮತ್ತು ಪಿ.ಯು.ಸಿ, ಪದವಿ, ಶಿಕ್ಷಕರ ತರಬೇತಿಯನ್ನು ಹರಪನಹಳ್ಳಿಯಲ್ಲಿ ಪೂರೈಸಿದರು.
ವಿದ್ಯಾರ್ಥಿಯಾಗಿದ್ದಾಗಲೇ ಭಾರತ ವಿದ್ಯಾರ್ಥಿ ಸಂಘಟನೆ(ಎಸ್.ಎಫ್.ಐ), ರೈತಸಂಘಟನೆ, ಸಮುದಾಯ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. 1986ರಲ್ಲಿ ಅಣು ಸಮರದ ವಿರುದ್ಧ ಜನಜಾಗೃತಿಗಾಗಿ ರಾಜ್ಯದಾದ್ಯಂತ ನಡೆದ ಚಳವಳಿಯಲ್ಲಿ ಜನಪ್ರಿಯವಾಗಿದ್ದ ಹಾಡು ‘ತಲೆಗಳು ಉರುಳ್ಯಾವೊ’ ಇವರೇ ರಚಿಸಿದ್ದು.
1988ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದರು. ಗೌರವ ಶಿಕ್ಷಕರ ಸಂಘಟನೆ, ಸಮುದಾಯ, ಭಾರತ ವಿಜ್ಞಾನ ಸಮಿತಿ, ಸರಕಾರಿ ನೌಕರರ ಒಕ್ಕೂಟ, ಕನ್ನಡಸಾಹಿತ್ಯ ಪರಿಷತ್ತಿನ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ‘ಅವ್ವ ಹಚ್ಚಿದ ದೀಪ’, ‘ಬೆಳಕಿನ ಹಣತೆ’, ‘ಬಾವುಟದ ಬಟ್ಟೆ’, ‘ಎದೆಯೊಳಗಿನ ಹಾಡು’ ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಕವನಗಳನ್ನು ಸಂಗ್ರಹಿಸಿ ‘ಸತ್ತಾವೋ ಹರೆಯಗಳು’ ಶೀರ್ಷಿಕೆಯಡಿ ಪ್ರಕಟಿಸಿದರು. ‘ಹೆಣದ ಮೇಲೆ’ ಶೀರ್ಷಿಕೆಯ ಕತಾ ಸಂಕಲನವೂ ರಚಿಸಿದ್ದಾರೆ. 2019ರಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2018ರಲ್ಲಿ ಸೇವೆಯಿಂದ ನಿವೃತ್ತರಾಗಿ ಸದ್ದಯ ಹರಿಹರದಲ್ಲಿ ನೆಲೆಸಿದ್ದಾರೆ.