ಲೇಖಕರಾಗಿ, ಉತ್ತಮ ಭಾಷಾಂತರಕಾರರಾಗಿ ಅದರಲ್ಲೂ ರಷ್ಯನ್ ಭಾಷೆಯಲ್ಲಿ ಪ್ರಭುತ್ವಸಾಧಿಸಿ, ನೇರವಾಗಿ ರಷ್ಯನ್ ಭಾಷೆಯಿಂದಲೇ ಹಲವಾರು ರಷ್ಯನ್ ಕೃತಿಗಳನ್ನು ಅನುವಾದಿಸಿ ಕನ್ನಡಿಗರಿಗೆ ನೀಡಿರುವ ಹರಿಶಂಕರರು ಹುಟ್ಟಿದ್ದು ಹರಿಹರದಲ್ಲಿ. ತಂದೆ ಪ್ರಸಿದ್ಧ ಸಾಹಿತಿಗಳು, ಶಾರದಾಮಂದಿರದ ಪ್ರಕಾಶಕರೂ ಆದ ಎಚ್.ಎಂ. ಶಂಕರನಾರಾಯಣ ರಾಯರು, ತಾಯಿ ಲಕ್ಷ್ಮೀ ದೇವಮ್ಮ. ಹರಿಹರದಲ್ಲಿ ಪ್ರಾರಂಭಿಕ ಶಿಕ್ಷಣ, ದಾವಣಗೆರೆಯ ಡಿ.ಆರ್.ಎಂ ಕಾಲೇಜಿನಲ್ಲಿ. ಇಂಟರ್ಮೀಡಿಯಟ್, ಸೀನಿಯರ್ ಇಂಟರ್ಮೀಡಿಯಟ್ ಹಾಗೂ ಪದವಿಗಾಗಿ ಓದಿದ್ದು ಮೈಸೂರಿನ ಯುವರಾಜ ಕಾಲೇಜು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಕನ್ನಡ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ರಷ್ಯನ್ ಭಾಷೆ, ಎಂ.ಎ.ಪದವಿಗಳು ಮತ್ತು ಎಂ.ಫಿಲ್ (ಭಾಷಾಂತರ) ಮೈಸೂರು ವಿಶ್ವವಿದ್ಯಾಲಯ; ಡಿಪ್ಲೊಮ ಇನ್ ರಷ್ಯನ್ (ಮೈಸೂರು ವಿಶ್ವವಿದ್ಯಾಲಯ), ಸರ್ಟಿಫಿಕೇಟ್ ಕೋರ್ಸ್ ಇನ್ ರಷ್ಯನ್- ಮಾಸ್ಕೊ ವಿಶ್ವವಿದ್ಯಾಲಯ, ಹೀಗೆ ರಷ್ಯನ್ ಭಾಷೆಯಲ್ಲಿ ಪಡೆದ ಪ್ರಭುತ್ವ. ಸಂಸ್ಕೃತ ಕಾವ್ಯ ಓದಿದ್ದು ಮೈಸೂರು ಸರಕಾರದ ಶಿಕ್ಷಣ ಇಲಾಖೆಯಿಂದ. ಎಂ.ಎ ಪದವಿಯ ನಂತರ ಅಧ್ಯಾಪಕರಾಗಿ ಸೇರಿದ್ದು ಹಾರ್ಡ್ವಿಕ್ ಹೈಸ್ಕೂಲಿಗೆ. ಕೆಲಕಾಲ ಅಲ್ಲಿ ಸೇವೆ ಸಲ್ಲಿಸಿದ ಹರಿಶಂಕರ್ ನಂತರ 1967ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಹಾಯಕ ಭಾಷಾಂತರಕಾರರಾಗಿ, ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಹೊಂದಿದರು. ನಾಲ್ಕು ಮಂದಿ ಪಿಎಚ್.ಡಿ ಹಾಗೂ 5 ಮಂದಿ ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಸಂಶೋಧನ ವಿದ್ಯಾರ್ಥಿಯಾಗಿ ಕೆಲಸಮಾಡುತ್ತಿದ್ದಾಗಲೇ ರಷ್ಯನ್ ಭಾಷೆಯನ್ನು ಕಲಿಯಲು ಅವಕಾಶ ಸಿಕ್ಕಿದ್ದರಿಂದ ರಷ್ಯನ್ ಭಾಷೆ ಕಲಿತು ಗೌರವ ಅಧ್ಯಾಪಕರಾಗಿ ರಷ್ಯನ್ ಭಾಷೆಯ ಬೋಧನೆ ಮಾಡಿದ್ದಾರೆ, ಮಾಸ್ಕೊದಲ್ಲಿ ನಡೆವ ರಷ್ಯನ್ ಭಾಷಾ ಸಮ್ಮೇಳನದಲ್ಲಿ ಭಾಗಿಯಾಗಿದ್ದರು, ನಂತರ ಮಾಸ್ಕೊದಲ್ಲಿ ಎರಡು ವರ್ಷಕಾಲ ‘ರಾದುಗಾ’ (ಕಾಮನಬಿಲ್ಲು) ಪ್ರಕಟಣಾ ಸಂಸ್ಥೆಯಲ್ಲಿ ಕನ್ನಡ ಅನುವಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಲವಾರು ರಷ್ಯನ್ ಗ್ರಂಥಗಳ, ಮಕ್ಕಳ ಪುಸ್ತಕಗಳ ಕನ್ನಡ ಅನುವಾದ ಮಾಡಿರುವ ಅವರು ಇದೇ ಸಂದರ್ಭದಲ್ಲಿ ಮಾಸ್ಕೊ ರೇಡಿಯೋ ಕನ್ನಡ ವಿಭಾಗದಲ್ಲಿ ಹೆಚ್ಚುವರಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲಿ ಪ್ರತಿದಿನ ವಾರ್ತೆಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿ ಮಾಸ್ಕೊ ರೇಡಿಯೋ ಕೇಂದ್ರದಿಂದ ಪ್ರಸಾರಮಾಡುವ ಕಾರ್ಯ ನಿರ್ವಹಿಸಿದ್ದಾರೆ. ಹೀಗೆ ಹಲವಾರು ಬಾರಿ ರಷ್ಯನ್ ಹಾಗೂ ಕನ್ನಡ ಭಾಷೆಯ ಸೇತುವೆಯಾಗಿ ದುಡಿಯಲು ಭಾಷಾಂತರ ಕಾರ್ಯದಲ್ಲಿ ವಹಿಸಿಕೊಂಡ ಜವಾಬ್ದಾರಿಗಳು. ರಷ್ಯನ್ ಭಾಷೆಯ ಮೇಲಿನ ಪ್ರೌಢಿಮೆಯಿಂದ ಮೂಲದಿಂದಲೇ ಕನ್ನಡಕ್ಕೆ ಹಲವಾರು ಕೃತಿಗಳನ್ನು ಅನುವಾದಿಸಿದ್ದಾರೆ. ಅವುಗಳಲ್ಲಿ ಚೆಕಾಫನ ಕಥೆಗಳು, ಕಜಾಕರು, ನರಿ ಮತ್ತು ಮೊಲ, ಷಿಲ್ತೂಹಿನ್, ಒಂದು-ಎರಡು-ಮೂರು, ಮಾನವ ಹೇಗೆ ಬಲಶಾಲಿಯಾದ, ಹಾರುವ ಕಂಬಳಿಹುಳು, ಋಷಿ ಮತ್ತು ಗುಲಾಬಿ, ಕವಿ ಜಿರೇನ್ಷೆ ಮತ್ತು ಸುಂದರಿ ಕರಾಪಷ್ ಮುಂತಾದ 15ಕ್ಕೂ ಹೆಚ್ಚು ಕೃತಿಗಳನ್ನು ಅನುವಾದಿಸಿದ್ದಾರೆ. ಇವರ ಇತರ ಸ್ವತಂತ್ರ ಕೃತಿಗಳೆಂದರೆ- ಸುಂದರ ಮಾಸ್ಕೊ ಮತ್ತು ಸುಂದರ ರಷಿಯಾ (ಪ್ರವಾಸ ಕಥನ), ತಿರುಮಲಾರ್ಯ ಮತ್ತು ಸಿಂಗರಾರ್ಯ (ವಿಮರ್ಶೆ), ಸಿಂದಬಾದ್ ನಾವಿಕ ಮತ್ತು ಮೀನುಗಾರ ಖಲೀಫ (ಮಕ್ಕಳ ಕಥೆಗಳು), ಚಿಕ್ಕದೇವರಾಜ ಸಪ್ತಪದಿ, ಸರ್ವಜ್ಞನ ವಚನಗಳು (ಸಂಗ್ರಹ), ಆಧುನಿಕ ಯೂರೋಪಿನ ಇತಿಹಾಸ (ಭಾಗ 1-2) ಮತ್ತು ಮೈಸೂರು ಒಡೆಯರ ಕಾಲದ ಸಾಹಿತ್ಯ ಮುಂತಾದ 15ಕ್ಕೂ ಹೆಚ್ಚು ಕೃತಿಗಳು. ಇಂಗ್ಲಿಷಿನಿಂದ ಅನುವಾದಿಸಿದ ಕೃತಿಗಳೆಂದರೆ- ಸಾಮ್ರಾಜ್ಯಕ್ಕಾಗಿ ಹೋರಾಟ, ದೆಹಲಿ ಸುಲ್ತಾನರ ಆಧಿಪತ್ಯ, ಮುಘಲ್ ಸಾಮ್ರಾಜ್ಯ ದೆಹಲಿ ಸುಲ್ತಾನರ ಆಧಿಪತ್ಯ (ಭಾಗ 2) ಮುಂತಾದ 10ಕ್ಕೂ ಹೆಚ್ಚು ಚಾರಿತ್ರಿಕ ಗ್ರಂಥಗಳು ಹಲವಾರು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಗೋಷ್ಠಿ ಮತ್ತು ಸಮ್ಮೇಳನಗಳಲ್ಲಿ ಭಾಗಿ ಹಾಗೂ ಪ್ರಬಂಧ ಮಂಡನೆ, ಬೆಂಗಳೂರಿನ ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಸೈನ್ಸ್, ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯ, ಹೈದರಾಬಾದಿನ ಸಿ.ಐ.ಇ.ಎಫ್.ಎಲ್., ಮಾಸ್ಕೋದ ಪ್ಯಾಟ್ರಿಸ್ ಲುಮುಂಬ ವಿಶ್ವವಿದ್ಯಾನಿಲಯ, ಚಳ್ಳಕೆರೆ, ದಾವಣಗರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳ ಅಧ್ಯಕ್ಷತೆ ಮುಂತಾದ ಸಮ್ಮೇಳನದ ಗೋಷ್ಠಿಗಳಲ್ಲಿ ಭಾಗಿಯಾಗಿದ್ದಾರೆ. ಹಿಂದಿ, ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಸಂಸ್ಕೃತ, ರಷ್ಯನ್ ಭಾಷೆಗಳ ಮೇಲೆ ಪಡೆದ ಪರಿಣತಿ. ಹಲವಾರು ಅಭಿನಂದನ ಗ್ರಂಥಗಳಿಗೆ ಬರೆದ ಲೇಖನಗಳು. ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನ, ಸೋವಿಯತ್ ಲ್ಯಾಂಡ್-ನೆಹರು ಪ್ರಶಸ್ತಿ, ಮೈಸೂರು ತ್ಯಾಗರಾಜ ಸಂಗೀತ ಸಭಾ, ಹುಣಸೂರು ತಾಲ್ಲೂಕು ಸಾಹಿತ್ಯ ಸಮ್ಮೇಳನ, ಮೈಸೂರು ವಿಭಾಗದ ಕನ್ನಡ ಸಾಹಿತ್ಯ ಪರಿಷತ್ತು ಮುಂತಾದವು ಗಳಿಂದ ಸನ್ಮಾನಿತರಾದ ಪ್ರೊ. ಹರಿಶಂಕರ್ರವರಿಗೆ ಎಪ್ಪತ್ತು ವರ್ಷ ತುಂಬಿದ (2010) ಶುಭಸಂದರ್ಭದಲ್ಲಿ ಹಿತೈಷಿಗಳು, ಅಭಿಮಾನಿಗಳು ‘ಹರಿಚಂದನ’ ಎಂಬ ಗೌರವ ಗ್ರಂಧ ಅರ್ಪಿಸಿದ್ದಾರೆ.