ಕತೆಗಾರ್ತಿ ಗಂಗಾ ಪಾದೇಕಲ್ ಅವರು 1948 ಸೆಪ್ಟೆಂಬರ್ 01 ರಂದು ಪುತ್ತೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ಗಂಗಾರತ್ನ ಅವರು ಓದಿದ್ದು ಏಳನೇ ತರಗತಿ. ತಂದೆ ಮುಳಿಯ ಕೇಶವಭಟ್, ತಾಯಿ ಮುಳಿಯ ಸರಸ್ವತಮ್ಮ. ಮುಂದೆ ತಂದೆ, ತಾಯಿ, ಅಣ್ಣ ಹಾಗೂ 35ರ ಪ್ರಾಯದಲ್ಲಿಯೇ ಪತಿ ಗೋವಿಂದ ಭಟ್ಟರನ್ನು ಕಳಕೊಂಡು ಇಬ್ಬರು ಎಳೆಯ ಹೆಣ್ಣುಮಕ್ಕಳೊಂದಿಗೆ ಬದುಕು ಕಟ್ಟಿಕೊಂಡ ಈ ಧೀಮಂತಿನಿ ಗಂಗಾ ಪಾದೇಕಲ್ ಅವರಿಗೆ ಸಂಗಾತಿಯಾಗಿ ಇದ್ದದ್ದು ಸಾಹಿತ್ಯದ ಓದು ಮತ್ತು ಬರವಣಿಗೆ.
ಪುತ್ತೂರಿನ ನರ್ಸಿಂಗ್ ಹೋಂನಲ್ಲಿ ಕಂಡ ದೃಶ್ಯವೇ ಇವರ 'ಜಾನಕಿಯ ಡೈರಿಯ ಕೆಲವು ಪುಟಗಳು' ಕಥಾವಸ್ತುವಾಗಿ ಮೂಡಿತು. ’ಪುಲಪೇಡಿ ಮತ್ತು ಇತರ ಕಥೆಗಳು, ಹೆಜ್ಜೆ ಮೂಡದ ಹಾದಿಯಲ್ಲಿ, ಚಿನ್ನದ ಸೂಜಿ, ವಾಸ್ತವ, ಕ್ಷಮಯಾಧರಿತ್ರಿ ’ ಅವರ ಕಥಾಸಂಕಲನಗಳು.ಸಮಗ್ರ ಕಥೆಗಳ ಭಾಗ 1, 2 ಮತ್ತು 3 ಕೂಡಾ ಪ್ರಕಟವಾಗಿದೆ. ’ಹೊನ್ನಳ್ಳಿಯಲ್ಲೊಮ್ಮೆ, ಸೆರೆಯಿಂದ ಹೊರಗೆ, ಪಯಣದ ಹಾದಿಯಲ್ಲಿ, ಬಂಗಾರದ ಜಿಂಕೆಯ ಹಿಂದೆ, ಕನಕಾಂಬರಿ, ಅದೃಷ್ಟರೇಖೆ ಕಾದಂಬರಿಗಳಾಗಿವೆ.
‘ಸೆರೆಯಿಂದ ಹೊರಗೆ' ಕಾದಂಬರಿಗೆ ಮಲ್ಲಿಕಾ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಸಾಹಿತ್ಯ ಅಕಾಡಮಿಗಾಗಿ ಸಂಪಾದಿಸಿದ ‘ಆಯ್ದ ಸಣ್ಣ ಕಥೆಗಳು’ (ಕಥಾಸಂಕಲನ), ಚಂದ್ರ ಭಾಗಿ ರೈ ಬದುಕು-ಬರಹ, ಮುಳಿಯ ಮೂಕಾಂಬಿಕ ಹಾಗೂ ಮುಳಿಯ ಕೃಷ್ಣಭಟ್ಟರ ಬದುಕು-ಬರಹ (ಪ್ರತಿಬಿಂಬ-ವ್ಯಕ್ತಿಚಿತ್ರ) ಪ್ರಕಟವಾಗಿವೆ., ‘ಇನ್ನೊಂದು ಅಧ್ಯಾಯ’ ಕಾದಂಬರಿಗೆ ವನಿತಾ ಕಾದಂಬರಿ ಸ್ಪರ್ಧಾ ಬಹುಮಾನ ಮತ್ತು ಬೇಲಾಡಿ ಮಾರಣ್ಣ ಮಾಡ ಸ್ಮಾರಕ ಪ್ರಶಸ್ತಿಗಳು, ಹಲವಾರು ಸಣ್ಣ ಕಥೆಗಳು ಇಂಗ್ಲಿಷ್, ತೆಲುಗು, ಹಿಂದಿ ಭಾಷೆಗೂ ಅನುವಾದಗೊಂಡಿವೆ. ‘ಪುಲಪೇಡಿ’ ಕಥೆಯಾಧಾರಿತ ರೇಡಿಯೋ ನಾಟಕಕ್ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ಬಹುಮಾನ, ಲೇಖಕಿಯರ ಸಂಘದ ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಹಲವಾರು ಬಾರಿ ಪತ್ರಿಕೆಗಳ ಕಥಾ ಸ್ಪರ್ಧೆಯಲ್ಲಿ ಬಹುಮಾನ, ತಾಲ್ಲೂಕು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಸನ್ಮಾನಗಳು ಸಂದಿವೆ.
ಗಂಗಾ ಪಾದೇಕಲ್ ಅವರ ಸಾಹಿತ್ಯದ ಕುರಿತು ಎಂ.ಫಿಲ್, ಪಿಎಚ್.ಡಿ. ಅಧ್ಯಯನಗಳು ನಡೆದಿವೆ. “ನನ್ನ ಮೊದಲ ಮತ್ತು ಕೊನೆಯ ಆದ್ಯತೆ ಪುಸ್ತಕ’ ಎಂದು ಹೇಳುವ ಗಂಗಾ ಪಾದೇಕಲ್ ಅವರು, ತಮ್ಮ ಬದುಕಿನ ಸ್ವಾನುಭವವನ್ನು ಬರೆದಿಡುತ್ತಿದ್ದಾರೆ.