About the Author

ಕನ್ನಡಕ್ಕಾಗಿ ಶ್ರಮಿಸಿದ, ಯುವ ಪ್ರತಿಭೆಗಳ ಪಡೆಯನ್ನೇ ಸೃಷ್ಟಿಸಿ ಕನ್ನಡದ ಕಂಪು ಹೊಸ ತಲೆಮಾರಿಗೂ ತಲುಪುವಂತೆ ದುಡಿದ ಸಾಹಿತಿ ಚಿ. ಶ್ರೀನಿವಾಸರಾಜು. ಮೇಷ್ಟ್ರು ಎಂದೇ ಖ್ಯಾತರು. ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ತಂದೆ ವಿ. ಚಿಕ್ಕರಾಜು, ತಾಯಿ- ಸಾವಿತ್ರಮ್ಮ. ಆರಂಭಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿಯೇ ಪಡೆದು, ಹೈಸ್ಕೂಲು ಓದುವಾಗ ‘ಶಾಲು ಜೋಡಿಗಳು’ ಎಂಬ ನಾಟಕ ರಚಿಸಿದ್ದರು. ಆನಂತರದಲ್ಲಿ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್ಸಿ. ಓದಿದ್ದು, ಕೆಲಕಾಲ ಲೋಹ ವಿಕಾಸ ಮಂಡಲಿಯಲ್ಲಿ ಸಾರಿಗೆ ಅಧಿಕಾರಿಯಾಗಿದ್ದರು. ‘ಛಸನಾಲ ಬಂಧು’ ಕವನ ಸಂಕಲನ ಪ್ರಕಟಿಸಿದ್ದರು. ಮತ್ತೆ ಓದುವ ಹಂಬಲದಿಂದ ಬಿ.ಎ, ಎಂ.ಎ. ಪದವಿ ಪಡೆದು, ಇಂಡಾಲಜಿಯಲ್ಲಿ ಡಿಪ್ಲೊಮಾ ಪದವಿ ಪಡೆದರು. ಸೆಂಟ್ರಲ್ ಕಾಲೇಜಿನ ಕನ್ನಡ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ಗುರು ಜಿ.ಪಿ.ರಾಜರತ್ನಂ ಅವರಂತೆ ತಾವೂ ಕನ್ನಡದ ಪರಿಚಾರಕರಾಗಲು ಪ್ರೇರಣೆ ದೊರಕಿತು.

ಕಾಲೇಜಿನ ಹೊರಗೆ ಪಿ.ಪಿ ('ಪ್ರೋಗ್ರೇಸಿವ್ ಪೀಪಲ್ಸ್') ಎಂಬ ಬಳಗ ಕಟ್ಟಿ ಆ ಮೂಲಕ ‘ಅಂಕಣ’, ‘ಶೂದ್ರ’ ಪತ್ರಿಕೆಗಳ ಹುಟ್ಟಿಗೆ ಕಾರಣರಾದರು. ಎಂ. ಎ. ಪದವಿಯ ಫಲಿತಾಂಶದ ನಿರೀಕ್ಷೆಯಲ್ಲಿರುವಾಗಲೇ ಕ್ರೈಸ್ಟ್ ಕಾಲೇಜಿನಲ್ಲಿ ಅಧ್ಯಾಪಕರ ಹುದ್ದೆ ದೊರಕಿತು. ಕನ್ನಡದ ವಾತಾವರಣವೇ ಇಲ್ಲದ ಕಾಲೇಜಿನಲ್ಲಿ ಕನ್ನಡದ ಕಂಪನ್ನು ಹರಡಲು ಅವರು ಹತ್ತಾರು ಯೋಜನೆಗಳನ್ನು ರೂಪಿಸಿದರು. ‘ವಿಮೋಚನ’ ಪಾಕ್ಷಿಕ ಹಾಗೂ ‘ಅಂಕಣ’ ಪತ್ರಿಕೆಗಳನ್ನು ಪ್ರಾರಂಭಿಸಿ, ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ'ದ ಹುಟ್ಟಿಗೆ ಕಾರಣರಾದರು. ಆ ಮೂಲಕ  ದ.ರಾ. ಬೇಂದ್ರೆ ಕಾವ್ಯ ಸ್ಪರ್ಧೆ, ಅ.ನ.ಕೃ. ಲೇಖನ ಸ್ಪರ್ಧೆ ಮುಂತಾದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಕನ್ನಡ ಪುಸ್ತಕ ಪ್ರಕಟಣೆಯ ಸಂಸ್ಕೃತಿ ಅರಳಲು ಶ್ರಮಿಸಿದರು.

1973ರಲ್ಲಿ ಸಿ.ಕೆ. ಲಕ್ಷ್ಮಣಗೌಡ ಎಂಬ ವಿದ್ಯಾರ್ಥಿ ನಿಧನರಾದ ಸಂದರ್ಭದಲ್ಲಿ ಅವರ ಸಹೋದರಿ ನೀಡಿದ 500ರೂ ಕೊಡುಗೆಯಿಂದ ಶ್ರೀನಿವಾಸರಾಜು ಅವರು ಪುಸ್ತಕ ಪ್ರಕಟಣಾ ಕಾರ್ಯವನ್ನು ಪ್ರಾರಂಭ ಮಾಡಿದರು. ಹೀಗೆ ಪ್ರಕಟಗೊಂಡ ಮೊದಲ ಕವನ ಸಂಕಲನ ಕ. ವೆಂ. ರಾಜಗೋಪಾಲರ ‘ನದಿಯ ಮೇಲಿನ ಗಾಳಿ’. ಚಿ. ಶ್ರೀನಿವಾಸರಾಜು ಅವರು 2000ರಲ್ಲಿ ನಿವೃತ್ತರಾದರು. ಅವರ ಪ್ರಬುದ್ಧ, ವಿಚಾರಪೂರ್ಣ ಬರಹಗಳು, ಕವಿತೆ, ನಾಟಕ, ಪ್ರಬಂಧ, ವ್ಯಕ್ತಿ ಚಿತ್ರ ಇತ್ಯಾದಿಗಳ ಸಂಕಲನವನ್ನು ಅಭಿನವ ಪ್ರಕಾಶನ ‘ಆಗಾಗ' ಸಂಪುಟದ ರೂಪದಲ್ಲಿ ಹೊರತಂದಿದೆ. \

 ಕೃತಿಗಳು: ಛಸನಾಲ ಬಂಧು (ಕವನ ಸಂಕಲನ), ನಾಟಕ- ಐದು ಮೂಕ ನಾಟಕಗಳು, ಹಳಿಯ ಮೇಲಿನ ಸದ್ದು, ನಾಳೆ ಯಾರಿಗೂ ಇಲ್ಲ ಮತ್ತು ಇತರ ನಾಟಕಗಳು, ಅನುವಾದ- ಬಾವಿ ಕಟ್ಟೆಯ ಬಳಿ ಹಾಗೂ ಜಿ.ಪಿ. ರಾಜರತ್ನಂ ಮತ್ತು ಕರ್ನಾಟಕ ಸಂಘ’ ಮತ್ತು ನಮ್ಮ ಕೈಲಾಸಂ ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆಗಾಗಿ ಎಸ್. ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಶ್ರೇಷ್ಠ ಪ್ರಕಟಣಾ ಪ್ರಶಸ್ತಿ, 1984ರ ವರ್ಷದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಗೌರವಗಳು ಸಂದಿವೆ.

ಕುವೆಂಪು ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಪ್ಪಳ್ಳಿಯ ಮಾರ್ಗದಲ್ಲಿ ತೀರ್ಥಹಳ್ಳಿಯಲ್ಲಿ ತಂಗಿದ್ದ ಸಂದರ್ಭದಲ್ಲಿ 2007 ರ ಡಿಸೆಂಬರ್ 28 ರಂದು ನಿಧನರಾದರು.

ಚಿ.ಶ್ರೀನಿವಾಸರಾಜು

(28 Nov 1942-28 Dec 2007)