ಲೇಖಕ, ಸಂಶೋಧಕ ಬಿ.ಎಸ್. ಸಣ್ಣಯ್ಯ ಅವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ ತಾಲ್ಲೂಕಿನ ಭೋಗನಹಳ್ಳಿಯಲ್ಲಿ. 1928ರ ಜೂನ್ 18 ರಂದು ಜನನ. ತಂದೆ ಸಣ್ಣೇಗೌಡ, ತಾಯಿ- ಬೋರಮ್ಮ. ಪ್ರಾರಂಭಿಕ ಶಿಕ್ಷಣ ರಾವಂದೂರಿನಲ್ಲಿ , ಪ್ರೌಢಶಾಲಾ ಶಿಕ್ಷಣವನ್ನು ಕೃಷ್ಣರಾಜನಗರದಲ್ಲಿ ಪೂರ್ಣಗೊಳಿಸಿದರು.
ಮೈಸೂರು ವಿವಿಯಿಂದ ಬಿ.ಎ. ಆನರ್ಸ್, ಎಂ.ಎ, ಬಿ.ಲಿಬ್ ಪದವಿಗಳ ಜೊತೆಗೆ , ಡಿಪ್ಲೊಮಾ ಇನ್ ಅರ್ಕೈವ್ಸ್ ಮೈಸೂರು ವಿವಿಯಿಂದ ಪ್ರಾಚ್ಯ ಸಂಶೋಧನಾಲಯದಲ್ಲಿ ವೃತ್ತಿ ( 1956) ಆರಂಭಿಸಿದರು.ಕನ್ನಡ ಅಧ್ಯಯನ ಸಂಸ್ಥೆಯ ಗ್ರಂಥ ಸಂಪಾದನಾ ವಿಭಾಗದ ನಿರ್ದೇಶಕರಾಗಿ ನಿವೃತ್ತರಾದರು. ಶ್ರವಣಬೆಳಗೊಳದ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯಲ್ಲಿ ಮುಖ್ಯಸ್ಥರಾಗಿ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಯ ‘ಗೋಮ್ಮಟಸಾರ’ ಕೃತಿಗೆ ಕನ್ನಡ ವ್ಯಾಖ್ಯಾನ ಬರೆದಿರುವ ಕೇಶವಣ್ಣನ ‘ಗೊಮ್ಮಟ ಸಾರ’ ಕೃತಿಯ ಪರಿಷ್ಕರಣೆಯಂತಹ ಬೃಹತ್ ಯೋಜನೆಯನ್ನೂ ಕಾರ್ಯರೂಪಕ್ಕೆ ತರುವಲ್ಲಿ ಇವರ ಜವಾಬ್ದಾರಿ ಮಹತ್ವದ್ದು.
ಪರಮಹಂಸ, ಸ್ವಾಮಿ ವಿವೇಕಾನಂದ, ಗಾಂಧೀಜಿ ಮುಂತಾದವರುಗಳ ಪ್ರಭಾವಕ್ಕೆ ಒಳಗಾದ ಸಾತ್ವಿಕ ವ್ಯಕ್ತಿತ್ವ ಇವರದು. ಕುವೆಂಪು, ಡಿ.ಎಲ್.ಎನ್., ಎಸ್.ವಿ. ಪರಮೇಶ್ವರಭಟ್ಟರು, ತ.ಸು.ಶಾಮರಾಯರ ಶಿಷ್ಯರು. ಡಿ.ಎಲ್.ಎನ್ ಅವರ ಪ್ರಾಚೀನ ಕಾವ್ಯಗಳ ಪಾಠಕ್ಕೆ ಮನಸೋತು ಹಸ್ತಪ್ರತಿ ಶಾಸ್ತ್ರದ ಕಡೆ ಅಧ್ಯಯನ ಆರಂಭಿಸಿದರು. ನಾಡಿನಾದ್ಯಂತ ಸಂಚರಿಸಿ ಹಸ್ತಪ್ರತಿ ಸಂಗ್ರಹಣೆಯಲ್ಲಿ ತೊಡಗಿದ್ದು ಹಲವಾರು ಹಸ್ತಪ್ರತಿಗಳ ಮೈಕ್ರೊ ಫಿಲಂ ತಯಾರಿಸಿದ್ದಲ್ಲದೆ, ಚಂಪೂ, ವಚನ, ಷಟ್ಪದಿ, ಸಾಂಗತ್ಯ ಮತ್ತು ಗದ್ಯ ಸಾಹಿತ್ಯ ಒಳಗೊಂಡಂತೆ 50ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ.
ನೇಮಿನಾಥಪುರಾಣ, ಹರಿವಂಶಾಭ್ಯುದಯಂ ಮೋಹನತರಂಗಿಣಿ, ರಾಜಾವಳಿ ಕಥಾಸಾರ, ವರ್ಧಮಾನ ಪುರಾಣ, ತೊರವೆರಾಮಾಯಣ, ಕಾವ್ಯಾವಲೋಕನ, ಸಾಹಸಭೀಮ ವಿಜಯ, ಅಜಿತ ಪುರಾಣ, ಖಗೇಂದ್ರಮಣಿದರ್ಪಣಂ ಸಂಪಾದಿಸಿದ್ದಾರೆ. ಪತ್ರಿಕೆಗಳಿಗೆ ಸಂಶೋಧನಾ ಲೇಖನಗಳನ್ನೂ ಬರೆದಿದ್ದು, ಕನ್ನಡ ಹಸ್ತಪ್ರತಿ ವರ್ಣನಾತ್ಮಕ ಸೂಚಿಯನ್ನು ಸಹೋದ್ಯೋಗಿಗಳೊಡನೆ ಸೇರಿ 10 ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ‘ಗ್ರಂಥ ಸಂರಕ್ಷಣೆ’, ‘ಹಸ್ತಪ್ರತಿಶಾಸ್ತ್ರ ಪರಿಚಯ’ ಗ್ರಂಥಗಳ ಜೊತೆಗೆ ಇವರು ಸಂಪಾದಿಸಿರುವ ಅತಿ ಮಹತ್ವದ ಕೃತಿ ಎಂದರೆ ‘ಪ್ರಾಚೀನ ಗ್ರಂಥ ಸಂಪಾದನೆ’, ಕನ್ನಡ ಸಾಹಿತ್ಯಕ್ಕೊಂದು ವಿಶಿಷ್ಟ ಕೊಡುಗೆ. ಮೈಸೂರು ವಿವಿಯ ತೀ.ನಂ.ಶ್ರೀಗಳ ಬಹುಮಾನ, ದೇವರಾಜ ಬಹದ್ದೂರ್ ಬಹುಮಾನ, ಶ್ರೀದೇವೇಂದ್ರ ಕೀರ್ತಿಭಟ್ಟಾರಕ ಸ್ವಾಮೀಜಿ ಅವರ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಐದು ಬಾರಿ ಬಹುಮಾನ, ಶ್ರವಣಬೆಳಗೊಳದ ಶ್ರೀಗೋಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿ, ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ ಮತ್ತು ಅಖಿಲ ಕರ್ನಾಟಕ ನಾಲ್ಕನೆಯ ಹಸ್ತಪ್ರತಿ ಶಾಸ್ತ್ರದ ಸಮ್ಮೇಳನಾಧ್ಯಕ್ಷರಾಗಿ ಗೌರವ ಸಂದಿದೆ.