Article

ಪರಿಸರ ಪ್ರೀತಿಯೊಂದಿಗೆ ಮಕ್ಕಳ ಪ್ರೀತಿ ‘ಹಸಿರುಡುಗೆ’

ಮಕ್ಕಳಲ್ಲಿ ಪರಿಸರ ಪ್ರೀತಿ ಮೂಡಿಸುವುದಕ್ಕಿಂತ ಅವರಲ್ಲಿರುವ ಪರಿಸರ ಪ್ರೀತಿಯನ್ನು ಪೋಷಿಸುವುದು ಬಹಳ ಮುಖ್ಯ ಅನಿಸುತ್ತದೆ. ಮಗುವೊಂದು ರಸ್ತೆಯಲ್ಲಿದ್ದ ಪುಟ್ಟ ನಾಯಿಮರಿಯನ್ನು ಎತ್ತಿ ಮನೆಗೆ ಒಯ್ಯುತ್ತದೆ, ಬೆಕ್ಕನ್ನು ಕಂಡಾಗ ಪ್ರೀತಿಯಿಂದ ಅಪ್ಪಿ ಮಾತಾಡಿಸಲು ತೊಡಗುತ್ತದೆ, ರುಚಿಯಾದ ಮಾವಿನ ಹಣ್ಣು ತಿಂದರೆ ಅದರ ಗೊರಟನ್ನು ಮಣ್ಣಲ್ಲಿ ಹೂತು... ಹಣ್ಣು ಕೊಡುವ ಮರವಾಗಲಿ ಎಂದು ಕಾಳಜಿಯಿಂದ ನೋಡಲು ತೊಡಗುತ್ತದೆ, ಶಾಲೆಯಲ್ಲಿ ಗಿಡ ನೆಡೋಣ ಎಂದು ಶಿಕ್ಷಕರು ಹೇಳಿದರೆ ಮನೆಯಲ್ಲಿ ಜಗಳಾಡಿಯಾದರೂ... ಗಿಡವೊಂದನ್ನು ಸಂಗ್ರಹಿಸಿಕೊಂಡು ಶಾಲೆಗೆ ಹೊರಡುತ್ತದೆ, ಅಳಿಲು ಮುಂತಾದ ಮುದ್ದಾದ ಪ್ರಾಣಿಗಳೊಂದಿಗೆ ಆಟಕ್ಕಿಳಿಯುವುದು, ಕಾಗೆಗಳೊಂದಿಗೆ ಸಂವಾದ ನಡೆಸುವುದು, ಗಿಡ ಬೆಳೆಸಲು ತವಕಿಸುವುದು ಎಲ್ಲ ಬಹುತೇಕ ಮಕ್ಕಳಲ್ಲಿ ಕಾಣುವ ಭಾವಗಳೇ ಆಗಿವೆ. ಆದರೆ ಬಹಳಷ್ಟು ಮಕ್ಕಳು ಬೆಳೆದಂತೆ ಅವರಲ್ಲಾಗುವ ಬದಲಾವಣೆ... ಪರಿಸರ ಪ್ರೀತಿ ಮಾಯವಾಗಿ ಸ್ವಾರ್ಥ, ಅತಿ ಆಸೆಗಳಿಗೆ ತೆರೆದುಕೊಳ್ಳುವುದು ಎಲ್ಲ ನಡೆಯುತ್ತಿರುವುದನ್ನು ನಾವು ನೋಡುತ್ತಿರುತ್ತೇವೆ.
ಅಂದರೆ ಮಕ್ಕಳಿದ್ದಾಗ ಇರುವ ಪರಿಸರ ಪ್ರೀತಿ ಬೆಳೆದಂತೆ ಬೆಳೆಯದೇ ಹೋಗುವುದೇಕೆ ಎಂದೆಲ್ಲ ಯೋಚಿಸತೊಡಗಿದಾಗ... ನಾವು ಅವರ ಪರಿಸರ ಪ್ರೀತಿಗೆ ಪೂರಕವಾಗಿ ವರ್ತಿಸುತ್ತಿಲ್ಲ ಎನ್ನುವ ಅರಿವು ನಮಗಾಗತೊಡಗುತ್ತದೆ. ಇಲ್ಲಿ ಸ್ನೇಹಿತ ಪರಮೇಶ್ವರಯ್ಯ ಸೊಪ್ಪಮಠ ಅವರು ಮಕ್ಕಳ ಪರಿಸರ ಪ್ರೀತಿ ಹೇಗೆಲ್ಲಾ ಹರಡಿಕೊಂಡಿದೆ ಹಾಗೂ ಅವರಿಗೆ ಒಂದಿಷ್ಟು ಮಾರ್ಗದರ್ಶನ ನೀಡಿದರೆ ಏನೆಲ್ಲಾ ಮಾಡಲು ಅವರು ತೊಡಗಿಕೊಳ್ಳುತ್ತಾರೆ ಎಂಬ ವಸ್ತುವನ್ನೇ ಇಟ್ಟುಕೊಂಡು ‘ಹಸಿರುಡುಗೆ’ ಮಕ್ಕಳ ಕಾದಂಬರಿ ರೂಪಿಸಿದ್ದಾರೆ.
ಪರಮೇಶ್ವರಯ್ಯ ಮಕ್ಕಳ ಪ್ರೀತಿಯ ಶಿಕ್ಷಕರಾಗಿದ್ದಾರೆ. ಅವರು ಸದಾ ಶೈಕ್ಷಣಿಕ ಚಿಂತನೆಯಲ್ಲಿ ತೊಡಗಿಕೊಳ್ಳುತ್ತ ಶಿಕ್ಷಣ ಕಾಳಜಿಯ ನೂರಾರು ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುತ್ತ ನಾಡಿನಾದ್ಯಂತ ಪರಿಚಿತರಾಗಿದ್ದಾರೆ. ಈಗ ಮಕ್ಕಳಿಗಾಗಿ ಕಾದಂಬರಿಯೊಂದನ್ನು ಬರೆಯುವ ಮೂಲಕ ತನ್ನೊಳಗಿನ ಮಕ್ಕಳ ಪ್ರೀತಿಯ ಇನ್ನೊಂದು ಆಯಾಮವನ್ನು ಪ್ರವೇಶಿಸಿದ್ದಾರೆ ಎನ್ನಬಹುದು.
ಮಕ್ಕಳು ಕಾಡಿನ ಪರಿಸರಕ್ಕೆ ಟ್ರೆಕ್ಕಿಂಗ ಹೋಗುವುದು, ಅಲ್ಲಿನ ಪರಿಸರ ನೋಡಿ ತುಂಬಾ ಖುಷಿ ಹಾಗೂ ಪ್ರಭಾವಕ್ಕೆ ಒಳಗಾಗುವುದು, ಮಕ್ಕಳು ಪರಿಸರ ಪ್ರೀತಿಯ ಪುಸ್ತಕ ಓದುವುದು ಎಲ್ಲ ಇದೆ. ರಸ್ತೆ ವಿಸ್ತರಣೆಗಾಗಿ ರಸ್ತೆ ಬದಿಯ ಸಾಲುಮರಗಳನ್ನು ಕಡಿಯುವುದನ್ನು ಪ್ರತಿಭಟಿಸಲು ಮುಂದಾಗುತ್ತಾರೆ. ಮಕ್ಕಳು ಗಿಡ ನೆಡಲು ಮುಂದಾಗುವ ಪ್ರಸಂಗವೂ ಬಂದಿದೆ. ಅವರು ನೆಟ್ಟಿದ್ದ ಗಿಡಗಳು ಮಾಯವಾಗಿದ್ದನ್ನು ನೋಡಿ ಮಕ್ಕಳು ಚಿಂತಿತರಾಗುತ್ತಾರೆ. ಅದೇ ವೇಳೆಗೆ ಮಕ್ಕಳು ಗಾಂಧಿ ಜಯಂತಿಯಂದು ನಡೆಸಬೇಕೆಂದಿದ್ದ ಸತ್ಯಾಗ್ರಹವೂ ಮನೆಯ ಹಿರಿಯರ ಅಸಹಕಾರ ಹಾಗೂ ಬೆದರಿಕೆಗಳಿಂದಾಗಿ ನಡೆಯದೇ ಇರುವುದು ಎಲ್ಲ ಮಕ್ಕಳ ಮನಸ್ಸಿಗೆ ನೋವುಂಟುಮಾಡುತ್ತದೆ.
ಆಗಲೇ ಹೇಳಿದ ಹಾಗೆ ಇಲ್ಲೆಲ್ಲ ಲೇಖಕರು ಮಕ್ಕಳ ಸಹಜ ಪ್ರಕೃತಿ ಪ್ರೇಮ, ತಮ್ಮದೇ ಆದ ವಿಧಾನಗಳ ಮೂಲಕ ಪರಿಸರ ಉಳಿಸಲು ತೊಡಗಿಕೊಳ್ಳುವುದು, ಶಾಲಾ ಶಿಕ್ಷಕರ ಹಾಗೂ ಬಸಜ್ಜನಂತಹ ಪರಿಸರ ಪ್ರೀತಿಯ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವುದುದೆಲ್ಲ ಓದುವ ಮಕ್ಕಳನ್ನು ಪರಿಸರ ಸಂಗತಿಯ ವಿಸ್ತಾರಕ್ಕೆ ಕೊಂಡೊಯ್ಯುತ್ತದೆ. ಸುಂದರಲಾಲ ಬಹುಗುಣ, ತೇಜಸ್ವಿ, ಶಿವರಾಮ ಕಾರಂತರಂತವರ ಉದಾಹರಣೆಗಳು, ಅಪ್ಪಿಕೋ ಚಳುವಳಿಯಂತಹ ಪರಿಸರ ಜಾಗೃತಿಯ ಸಂಗತಿಗಳು, ತಿಮ್ಮಕ್ಕ, ಮೇಧಾಪಾಟ್ಕರ ಮುಂತಾದವರನ್ನು ಕಥಾಹರವಿನಲ್ಲಿ ಮಕ್ಕಳ ಮುಂದಿಡುವುದೆಲ್ಲ ಸೊಪ್ಪಿಮಠ ಅವರು ಮಾಡಿದ್ದಾರೆ.
ಕೊನೆಯಲ್ಲಿ ಮಕ್ಕಳೇ ಉಪಾಯವೊಂದನ್ನು ಹುಡುಕಿ ಮಕ್ಕಳು ಮನೆ ಬಿಟ್ಟು ಕಾಡಿಗೆ ಹೋಗಿ ಉಳಿಯುವುದು ಇದೆ. ಮಕ್ಕಳು ಮನೆಯಲ್ಲಿ ಕಾಣದಾಗಿ ಅದೊಂದು ಸ್ಫೋಟಕ ಸುದ್ದಿಯಾಗಿ ಹರಡಿಕೊಳ್ಳುವ ಮೂಲಕ ಮುಖ್ಯಮಂತ್ರಿಗಳಾದಿಯಾಗಿ ಮಕ್ಕಳಿದ್ದಲ್ಲಿಗೆ ಬರುವಂತಾಗಿ ಮಕ್ಕಳ ಪರಿಸರ ಕಾಳಜಿಯ ಬೇಡಿಕೆ ಈಡೇರುವಲ್ಲಿಗೆ ಕಾದಂಬರಿ ಮುಗಿಯುತ್ತದೆ.
ಇಲ್ಲಿ ಪರಮೇಶ್ವರಯ್ಯ ಸೊಪ್ಪಿ ಮಠ ಅವರು ಮತ್ತೆ ಮತೆ ಹೇಳಬೇಕಾದ ಪರಿಸರದ ಸಂಗತಿಗಳನ್ನು ಗ್ರೇಟಾ ಥನ್‍ಬರ್ಗ ಅಂತಹ ಹುಡುಗಿಯ ಉದಾಹರಣೆಯ ಮೂಲಕ, ತೇಜಸ್ವಿಯಂತಹ ಲೇಖಕರ ಮೂಲಕ, ಬಸಜ್ಜನಂತಹ ಅಪ್ಪಟ ಪರಿಸರ ಪ್ರೀತಿಯ ಸಾಮಾನ್ಯನ ಮೂಲಕ, ಹಲವು ಕನ್ನಡ ಲೇಖಕರ ಪುಸ್ತಕಗಳನ್ನು ಹೆಸರಿಸುವ ಮೂಲಕ ಕಥೆಯೊಳಗೇ ಒಂದಿಷ್ಟು ಹೆಚ್ಚಿನ ಉಣಿಸನ್ನು ತಂದಿಡುತ್ತಾ... ಮಕ್ಕಳು ಓದುತ್ತಾ ಪರಿಸರದ ಸಂಗತಿ ತಿಳಿಯುವಂತೆ ಮಾಡುವದರೊಂದಿಗೆ ಮನುಕುಲದ ಒಳಿತಿಗಾಗಿ ಸಮಾಜದ ಜವಾಬ್ಧಾರಿ ಹೇಗೆಲ್ಲಾ ಹರಡಿದೆ ಎಂಬ ಮಾತನ್ನು ಮುಟ್ಟಿಸಲು ಪ್ರಯತ್ನಿಸಿ ಸಫಲರಾಗಿದ್ದಾರೆ ಎಂದೇ ಹೇಳಬಹುದು. ಪರಿಸರ ಪ್ರೀತಿಯೊಂದಿಗೆ ಮಕ್ಕಳ ಪ್ರೀತಿ ಜೊತೆಯಾಗಿಸಿದ ಕಾದಂಬರಿ ದೊಡ್ಡವರು, ಚಿಕ್ಕವರನ್ನು ಸೆಳೆಯುತ್ತದೆ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಮ್ಮಣ್ಣ ಬೀಗಾರ