Article

ಹೈಡ್ ಪಾರ್ಕ್ ಕಥೆ: ‘ದ್ವಂದ್ವ’ ಪರಿಕಲ್ಪನೆಯ ಸುಂದರ ಅನಾವರಣ

ನಮ್ಮ ಬಯಕೆ-ಇಚ್ಛೆಗಳ ವಿರುದ್ಧ ಆಯ್ಕೆಯ ಅನಿವಾರ್ಯತೆ ಇದ್ದಾಗ ದ್ವಂದ್ವಗಳು (ಗೊಂದಲ) ಕಾಡುತ್ತವೆ. ಅವುಗಳ ಸ್ವರೂಪ-ತೀವ್ರತೆಯ ಮೇಲೆ ಪರಿಹಾರವು ನಿರ್ಣಯವಾಗುತ್ತದೆ.ಇದಕ್ಕೆ ವ್ಯಕ್ತಿಯ ವ್ಯಕ್ತಿತ್ವವೂ ಬಹುಪಾಲು ಕಾರಣವಾಗುತ್ತದೆ ಎಂಬುದು ಮನೋವಿಜ್ಞಾನ. ಕೆಲವು ದ್ವಂದ್ವಗಳಿಗೆ ಕಾಲವೇ ಉತ್ತರಿಸುತ್ತದೆ ಎಂಬುದು ತತ್ವಜ್ಞಾನ. 

ಈ ದ್ವಂದ್ವಗಳ ಪರಿಣಾಮವಾಗಿ ನಲುಗುವ-ಕಳವಳಿಸುವ- ತಳಮಳಗೊಳ್ಳುವ-ಅಸಮಾಧಾನ- ಎಷ್ಟೇ ವಿಚಾರ ಮಾಡಿದರೂ ಮತ್ತೇ ಮತ್ತೆ ಅಂಟಿಕೊಂಡು ನಮ್ಮ ಬಗ್ಗೆ ನಮಗೇ ಅಸಹ್ಯವೆನಿಸುವ, ಈ ಕಾಡುವ ಭಾವಗಳು ಹಾಗೂ ಬೇರೆ ದಾರಿಯೇ ಇಲ್ಲದಂತೆ ಹಿಂಸೆ-ಯಾತನೆ ಅನುಭವಿಸುವ ಅನಿವಾರ್ಯತೆಯಾಗಿ, ಜೀವನದುದ್ದಕ್ಕೂ ವ್ಯಕ್ತಿತ್ವವೊಂದರ ಸ್ಥಾಯಿ-ಜೀವವಾಗಿ ಇರುವ ದ್ವಂದ್ವಗಳ ಸ್ವರೂಪ-ಗುಣಲಕ್ಷಣ-ಪ್ರಕಾರಗಳು-ಪರಿಣಾಮಗಳ ಕುರಿತು ‘ವರ್ಜಿನ್ ಮೊಹಿತೊ’ ಕಥಾ ಸಂಕಲನದ ‘ಹೈಡ್ ಪಾರ್ಕ್’ ಕಥೆಯ ನಾಯಕಿ ‘ವಂದನಾ’ ಪಾತ್ರವು ಅಧ್ಯಯನಕ್ಕೆ ಸೂಕ್ತ ವಸ್ತುವಾಗುತ್ತದೆ. ಕಥೆಗಾರ ಸತೀಶ ಚಪ್ಪರಿಕೆ (ಅಂಕಿತ ಪುಸ್ತಕ, ಬೆಂಗಳೂರು) ಅವರು ಈ ಪಾತ್ರವನ್ನು ದ್ವಂದ್ವಗಳ ಮೊತ್ತವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗಿರುವುದೇ ಈ ಕಥೆಯ ವಿಶೇಷ.

ಮಾನಸಿಕವಾಗಿ ಮುದ್ದೆ ಮಾಡುತ್ತದೆ ಬದುಕು! : ದ್ವಂದ್ವಗಳ ಸಿದ್ಧಾಂತವನ್ನು ಸರಳೀಕರಿಸುವುದಾದರೆ, ಬೇಕು-ಬೇಕು, ಬೇಕು-ಬೇಡ ಮತ್ತು ಬೇಡ-ಬೇಡ ಎಂಬ ವಿವಿಧ ಪ್ರಕಾರಗಳಡಿ ಕಥಾ ನಾಯಕಿ ‘ವಂದನಾ’ ಪಾತ್ರವನ್ನು ವಿಶ್ಲೇಷಿಸಬಹುದು. ಎರಡೂ ಆಯ್ಕೆಗಳು ನಮಗೆ ಬೇಕಿದ್ದರೂ ಒಂದನ್ನು ಮಾತ್ರ ಆಯ್ಕೆ ಮಾಡುವ  ಅನಿವಾರ್ಯತೆ ಬದುಕಿನಲ್ಲಿರುತ್ತದೆ. ಮತ್ತೊಂದನ್ನು ತ್ಯಾಗ ಮಾಡುವ ಎದೆಗಾರಿಕೆ ತೋರಲೇಬೇಕು. ಬೇಕಿರುವ ಕಡೆ ಹೋಗುವಂತಿಲ್ಲ; ಆದರೆ, ಬೇಡವಾದದ್ದರ ಜೊತೆ ಇರಲೇಬೇಕು. ‘ಬೇಡ-ಬೇಡ’ ಹೀಗೆ ಎರಡೂ ‘ಬೇಡ’ವಾಗಿದ್ದರೂ ಒಂದನ್ನು ಆಯ್ಕೆ ಮಾಡುವ ಅನಿವಾರ್ಯತೆ ಇರುತ್ತದೆ. ಇಂತಹ ಪ್ರಸಂಸಗಳು ಬದುಕನ್ನು ಮಾನಸಿಕವಾಗಿ ಮುದ್ದೆಯಾಗಿಸುತ್ತವೆ. ನಮ್ಮ ವಿದ್ಯಾರ್ಹತೆ, ಬುದ್ದಿಯ ತೀಕ್ಷಣತೆ, ಅನುಭವದ ಗಟ್ಟಿತನ, ದೂರದೃಷ್ಟಿಯ ವಿಶೇಷತೆ ಏನಿದ್ದರೂ ಕೆಲಸಕ್ಕೆ ಬಾರದು ಎಂಬ ಅಂಶವು 

ಮನೋವಿಜ್ಞಾನಕ್ಕೊಂದು ಸವಾಲು: ಸಂಸ್ಕೃತಿ-ಸಾಮಾಜಿಕ ಮರ್ಯಾದೆಗಾಗಿ, ತೀರಾ ಖಾಸಗಿಯಾದ ದ್ವಂದ್ವಗಳ ಜೊತೆ ರಾಜಿ ಮಾಡಿಕೊಂಡೇ, ಬದುಕು ಸಾಗಿಸುತ್ತಿದ್ದ ವಂದನಾ, ಮದುವೆಯಾಗುವ ಹೆಣ್ಣಿನ ಆಯ್ಕೆ ವಿಷಯದಲ್ಲಿ ಮಗ (ಚಿರು) ವಿಫಲನಾಗಿದ್ದಾನೆ ಎಂಬ ಅಸಮಾಧಾನದ ದ್ವಂದ್ವವು, ಅವಳನ್ನು ನಿಂತ ಭೂಮಿಯೇ ಕುಸಿಯುವಂತಹ ಭೀಕರ ಅನುಭವದ ಕೂಪಕ್ಕೆ ತಳ್ಳಿದರೂ, ಅದಕ್ಕೆ ಪರಿಹಾರ ಮಾತ್ರ ಕಾಣದು. ಇಂತಹ ಹೆಣ್ಣಿನ ಜೊತೆ ಮಗನ ಸಂಸಾರ ಸುಖವಾಗುವುದೇ? ಎಂಬ ಭೀತಿ ಇದ್ದರೂ, ಆ ಕ್ಷಣದ ಮೌಲ್ಯವಾಗಿ ವಂದನಾ, ಆ ಜೋಡಿಯನ್ನು ತನ್ನ ಮನೆಗೆ ಆಹ್ವಾನಿಸುವುದು ಅವಳಿಗೆ ಅನಿವಾರ್ಯವಾಗುತ್ತದೆ. ಮೊದಲೇ ದ್ವಂದ್ವಗಳಿಂದ ಮಾನಸಿಕವಾಗಿ ಜರ್ಜರಿತಗೊಂಡಿದ್ದ ಅವಳ ಮನಸ್ಸು, ಮಗನ ಇಂತಹ ನಿರ್ಧಾರವು ಅವಳ ಜೀವನ ನೆಮ್ಮದಿಯ ಮೇಲೆ  ದ್ವಂದ್ವಗಳ ಬೆಟ್ಟವನ್ನೇ ಉರುಳಿಸುತ್ತದೆ. ಎಂದಿಗೂ ಪರಿಹಾರವೇ ಇರದ, ಕೇವಲ ಕಾಲ ಮಾತ್ರವೇ ಸಮಧಾನ ಕೊಡಬಹುದಾದ, ದ್ವಂದ್ವಗಳನ್ನು ಹೊತ್ತುಕೊಂಡೇ ಅವಳು ಲಂಡನ್ ನಿಂದ ಭಾರತದ ಪುಣೆಗೆ ಬರಬೇಕಾಗುತ್ತದೆ. 

ಕೇವಲ ಕಾಮವಾಗಿದ್ದರೆ.!ತಾನು ಹೇಳಲೇ ಬೇಕಾದ ವಿಷಯಕ್ಕಾಗಿಯೇ ತಾಯಿ ವಂದನಾಳನ್ನು ಲಂಡನ್ ಗೆ ಕರೆಯಿಸಿಕೊಂಡಿದ್ದ ಮಗ ಚಿರಂತನ್, ಅಲ್ಲಿಯ ಹೈಡ್ ಪಾರ್ಕ್ ನಲ್ಲಿ ಸಂಚರಿಸುವಾಗ ‘ಕೇವಲ ಕಾಮವಾಗಿದ್ದರೆ ಅದನ್ನು ಕೊಡವಿ ಜೀವನದಲ್ಲಿ ಮೇಲೆದ್ದು ಬರಬಹುದಿತ್ತು. ಆದರೆ, ಪ್ರೇಮವನ್ನೇ ಜೀವಿಸುವವರಿಗೆ ಕೊಡವಿಕೊಳ್ಳಲು ಆಗದು, ಅಲ್ವೇನಮ್ಮ?’ ಎಂಬ ಆತನ ಮಾತು ವಂದನಾಳ ಖಾಸಗಿ ಬದುಕನ್ನು ಅಲುಗಾಡಿಸುತ್ತದೆ. 

ತನ್ನ ಪುಣೆಯ ಕಾಲೇಜು ಅಧ್ಯಾಪಕನಿಗೆ ಮನಸೋತಿದ್ದಳು. ಆದರೆ, ತನ್ನ ಮತ್ತು ಆತನ ಮಧ್ಯೆ ಸಾಕಷ್ಟು ವಯಸ್ಸಿನ ಅಂತರವಿತ್ತು. ಒಂದು ವೇಳೆ ಈ ಅಂತರ ಕಡೆಗಣಿಸಿದರೂ ಆತ ನೀಡುವ ಸುಖವನ್ನು ಯಾವ ಗಂಡಸು ನೀಡಲಾರದು ಎಂದೇ ಮನ ಹೇಳುತ್ತಿತ್ತು. ಅಮ್ಮನ ಒತ್ತಾಯದಿಂದ ಅರವಿಂದನೊಂದಿಗೆ ಮದುವೆಯಾಯ್ತು. ನಂತರ ವಿಚ್ಛೇದನ..ಆದರೆ, ಕಾಮವು ಮನೋ-ದೈಹಿಕವಾಗಿ ಕಾಡುತ್ತಲೇ ಅದರ ಶಮನಕ್ಕಾಗಿ ಲೇಖಕರು ಕಥಾನಾಯಕಿಯನ್ನು ‘ಬಾತ್ ರೂಂ’ಗೆ ಕಳುಹಿಸುವ ಸೂಕ್ಷ್ಮತೆ ಗಮನಾರ್ಹ. ‘ಬಾಯ್ ಫ್ರೆಂಡ್ ಮಾಡಿಕೊಂಡರೆ ತಪ್ಪಿಲ್ಲ’ ಎಂಬ ಸಹೋದ್ಯೋಗಿಯೊಬ್ಬಳ ಮಾತು ಅವಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಆದರೆ, ಮರುಕ್ಷಣವೇ, ಮರ್ಯಾದೆ ಮುಸುಕಿನೊಳಗೆ ಕಾಮವನ್ನು ಹತ್ತಿಕ್ಕಿ, ಮಗನ ಉಜ್ವಲ ಭವಿಷ್ಯದೆಡೆಗೆ ಮನಸ್ಸನ್ನು ಕೇಂದ್ರೀಕರಿಸುತ್ತಾ ಬರುವುದು, ಕಾಮ ಮತ್ತೇ ಕಾಡಿದಾಗ ‘ಬಾತ್ ರೂಂ’ ಪ್ರವೇಶ, ಸಾಮಾಜಿಕ ಗೌರವದ ರಕ್ಷಣಾತ್ಮಕ ವಿಧಾನ...ಹೀಗೆ ಎಂದಿಗೂ ಮುಗಿಯದ ದ್ವಂದ್ವದ ಭಾಗಿವಾಗಿಯೇ ಅವಳ ಬದುಕು ಸಾಗಿತ್ತು. 

ಮಕ್ಕಳಾದರೇನಂತೆ ಮದುವೆಯಾಗಲು…! ಎದೆ ಎತ್ತರದ ಮಗನಿದ್ದೂ ಬಾಯ್ ಫ್ರೆಂಡ್ ಜೊತೆಗೆ ತಿರುಗಾಡುವುದು, ಸಾಧ್ಯವಿದ್ದರೆ ಮದುವೆಯೂ ಆಗುವುದು, ತನಗೊಬ್ಬ ಮಗ ಇದ್ದರೇನಂತೆ..? ಎಂಬ ಭಾವ ಅವಳನ್ನು; ತಾನು ಇಷ್ಟಪಡುವ ಗಂಡಿನೊಂದಿಗೆ ಮದುವೆಯಾಗಲು ಪ್ರಚೋದಿಸುತ್ತಿತ್ತು. ಆದರೂ, ಅಸಾಧಾರಣ ಮನೋಸ್ಥೈರ್ಯದಿಂದ ಅದುಮಿಟ್ಟಿದ್ದಳು. ಒಂದು ಕಡೆ -ಬೇಕು: ಮತ್ತೊಂಡೆದೆ ಬೇಡ. ಆದರೆ, ಮಗನನ್ನು ಮದುವೆಯಾಗುವ ವಿಧವೆ, ಆತನಿಗಿಂತ 20 ವರ್ಷ ಹಿರಿಯಳು. ಇಬ್ಬರು ಮಕ್ಕಳ ತಾಯಿ. ಹೆಸರು ಜ್ಯುಲಿಯಾ. ಹೆಸರು, ಅಧಿಕಾರ, ಸಂಬಳ ಎಲ್ಲವೂ ಇದೆ. ಆಕೆ ತನ್ನಂತೆ ಹೆಣ್ಣು.  ಮಕ್ಕಳಿಗಾದರೂ ಮದುವೆ ಇಲ್ಲವೇ ಬಾಯ್ ಫ್ರೆಂಡ್ ಬೇಕು ಎಂಬ ಆಸೆ ಏಕೆ? ತನ್ನಂತೆ ಇರಬಾರದೇಕೆ? ಸಂಸ್ಕೃತಿ-ಸಾಮಾಜಿಕ ಒಪ್ಪಿಗೆಯ ಅಲ್ಲಿಯ ಪರಿಸರ ಹಾಗೆ ಅವಕಾಶ ನೀಡಿದೆ ಎಂದು ಆ ವಿಚಾರ ಅಲ್ಲಿಯೇ ಬಿಟ್ಟಿದ್ದಳು. ಆದರೆ, ಮಗ ಮಾತ್ರ; ತನ್ನ ಒಪ್ಪಿಗೆ ಬಯಸುತ್ತಾನೆ ಹೊರತು; ‘ಇಷ್ಟವಿಲ್ಲ’ ಎಂದರೂ ಅವಳನ್ನು ಬಿಡಲು ತಯಾರಿಲ್ಲ. ‘ನಿನ್ನ ವಯಸ್ಸಿನ ಹುಡುಗಿಯನ್ನು ನೋಡಿ ಜೀವನದಲ್ಲಿ ಸೆಟ್ಲ ಆಗು’ ಎನ್ನುತ್ತಾಳೆ. ಮಗನ ನಿರ್ಧಾರ ಮಾತ್ರ ಅವಳ ದ್ವಂದ್ವದ ತೀವ್ರತೆಯನ್ನೇ ಹೆಚ್ಚಿಸಿ, ತತ್ತರಿಸುವಂತೆ ಮಾಡುತ್ತದೆ. ಇಂತಹ ನಿರ್ಧಾರ ತಳೆಯಲು ಏನು ಕಾರಣ ಎಂಬ ಸಂಶಯ ರೂಪದ ಪ್ರಶ್ನೆಗೆ ಎಂದೂ ಸಿಗದ ಉತ್ತರವಿದು. 

ಮಗನಿದ್ದೂ ಮದುವೆಯಾಗಲು ಒಪ್ಪದ ತನ್ನ ಮನಸ್ಸು, ಮಕ್ಕಳಿದ್ದೂ ಮದುವೆಯಾಗ ಬಯಸುವ ಜ್ಯುಲಿಯಾ ಮನಸ್ಸು -ಎರಡೂ ಅವಳಿಗೆ ಒಗಟಾಗಿಯೇ ಉಳಿಯುತ್ತವೆ-ಅವರವರ ಭಾವಕ್ಕೆ ತಕ್ಕಂತೆ ಎಂದು ಸುಮ್ಮನಿರುವಂತಿಲ್ಲ. ಅತ್ಯಂತ ಖಾಸಗಿ ರೂಪದ ಈ ದ್ವಂದ್ವ-ಅವಳ ಇತರೆ ದ್ವಂದ್ವಗಳಲ್ಲಿ ಮತ್ತೊಂದು ಹೆಚ್ಚುವರಿಯಾಗೇ ಸೇರಿಕೊಳ್ಳುತ್ತದೆ. ತಾನು ಮದುವೆಯಾಗುವುದು ಸರಿಯಲ್ಲ ಎಂದು ತಿಳಿದರೆ ಅದು ವಂದನಾಳ ನಿರ್ಧಾರ. ಎರಡು ಮಕ್ಕಳಿದ್ದೂ ಮದುವೆಯಾದರೆ ತಪ್ಪಿಲ್ಲ ಎನ್ನುವುದು ಜ್ಯುಲಿಯಾಳ ಖಾಸಗಿ ನಿರ್ಧಾರ. ಒಂದು ಕಡೆ ಬೇಡ; ಮತ್ತೊಂದು ಕಡೆಯೂ ಬೇಡ. ಆದರೆ, ತಾನಿರುವ ಸ್ಥಿತಿಯ ಹಿಂಸೆ ಮರೆತಾದರೂ ತನ್ನಿರುವನ್ನು ವಂದನಾ ಒಪ್ಪಿಕೊಳ್ಳಲೇ ಬೇಕು. ತಪ್ಪಿದರೆ; ಜ್ಯುಲಿಯಂತೆ ನಿರ್ಧಾರ ತೆಗೆದುಕೊಳ್ಳಲಾದೀತೆ? 

ಎಲ್ಲಕ್ಕಿಂತ ಹೆಚ್ಚಾಗಿ, ಎರಡು ಮಕ್ಕಳ ತಾಯಿಯನ್ನೇ ಮದುವೆಯಾಗುವ ಹಠ ಮಗ-ಚಿರಂತನದ್ದು. ತಾಯಿ ಎಂಬ ಮಾತ್ರಕ್ಕೆ ಅವನ ಮೇಲೆ ಹಕ್ಕು ಚಲಾಯಿಸಲಾದೀತೆ? ಅದೂ ಮದುವೆ ವಿಷಯದಲ್ಲಿ-ಎಂಬ ತಾಕಲಾಟ ಅವಳನ್ನು ಮಾನಸಿಕವಾಗಿ ಹಿಂಡಿ ಹಿಪ್ಪಿ ಮಾಡುತ್ತದೆ. 

ಆಹ್ವಾನಿಸದೇ ಬೇರೆ ದಾರಿ ಏನಿತ್ತು? ಭಾರತಕ್ಕೆ ಮರಳುವ ಮೂರು ದಿನದ ಮುನ್ನವೇ  ಮಗನ ನಿರ್ಧಾರ ತಿಳಿದಿತ್ತು. ತಾಯಿಯಾಗಿ ಸೂಕ್ತ ಪರಿಹಾರ ಸೂಚಿಸಲಾಗದೇ ದ್ವಂದ್ವದಲ್ಲೇ ಕಳೆದಳು. ವಿಮಾನ ನಿಲ್ದಾಣದ ಡಿಪಾರ್ಚರ್ ಗೇಟ್ ಬಂದರೂ ದ್ವಂದ್ವಗಳನ್ನು ಎದುರಿಸಲು ಆಕೆ ಶಕ್ತವಾಗಲೇ ಇಲ್ಲ. ಆಕೆಯ ಯಾವುದೇ ನಿರ್ಧಾರವು ಅವಳನ್ನು ಸಮಾಧಾನ ಪಡಿಸುತ್ತಿರಲಿಲ್ಲ. ನಿರ್ಧಾರ ತಿಳಿಸಬೇಕು ಎಂದು ವಿಚಾರ ಮಾಡು ಮಾಡುತ್ತಿದ್ದಂತೆ ದ್ವಂದ್ವಗಳು ದಾಳಿ ಇಟ್ಟು, ಅವಳನ್ನು ಮಾನಸಿಕವಾಗಿ ಕುಗ್ಗಿಸುತ್ತವೆ. ಇಲ್ಲಿ, ತನ್ನ ಕೌಟುಂಬಿಕ ಅನುಭವ, ಜೀವನದ ಕಾಣ್ಕೆ, ಅಧ್ಯಯನ ಆಳವೆಲ್ಲವೂ ನಿರರ್ಥಕ. ವಿಮಾನದ ಸಮಯವಾಗುತ್ತಿದ್ದಂತೆ ‘ ಪುಣೆಯಲ್ಲಿರುವ ನನ್ನ ಮನೆಯು ಮಗ, ಸೊಸೆ, ಮೊಮ್ಮಕ್ಕಳಿಗಾಗಿ ಕಾಯುತ್ತಿರುತ್ತದೆ’ ಎಂದು ಹೇಳುವ ಮೂಲಕ ತಿರುಗಿ ನೋಡದಂತೆ ಹೊರಡುತ್ತಾಳೆ. ಅವರನ್ನು ತನ್ನ ಮನೆಗೆ ಆಹ್ವಾನಿಸುವ ಈ ನಿರ್ಧಾರ ಹೊರತು ಪಡಿಸಿ ಆಕೆಗೆ ಬೇರೆ ದಾರಿ ಏನಿತ್ತು? 

ಕಥೆ ಏನೋ ಮುಗಿಯುತ್ತದೆ. ಆದರೆ, ವಂದನಾಳ ದ್ವಂದ್ವಗಳು ಬೆಳೆಯುತ್ತಲೇ ಹೋಗುತ್ತವೆ. ಬಹುತೇಕ ದ್ವಂದ್ವಗಳಿಗೆ ಸ್ವಂತ ವಿವೇಚನಾ ಶಕ್ತಿಯಿಂದ ವಂದನಾ ಪರಿಹಾರ ಕಾಣುತ್ತಾಳೆ. ಕೆಲ ದ್ವಂದ್ವಗಳಿಗೆ ಕೇವಲ ಕಾಲವೇ ಉತ್ತರಿಸುತ್ತದೆ ಎಂಬ ದ್ವಂದ್ವ ನೀತಿಯ ವಿರಾಟ ಸ್ವರೂಪವನ್ನು ಈ ಕಥೆ ಧ್ವನಿಸುತ್ತದೆ. 

-ವೆಂಕಟೇಶ ಮಾನು 

ಪುಸ್ತಕ ಕುರಿತಾದ ಮಾಹಿತಿಗಾಗಿ ಬುಕ್ ಬ್ರಹ್ಮಗೆ ಭೇಟಿ ಕೊಡಿ- https://www.bookbrahma.com/book/virgin-mojito

ವೆಂಕಟೇಶ ಮಾನು